2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ತೀವ್ರಗೊಂಡಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂಚೂಣಿಯಲ್ಲಿವೆ. ಭಾರತದ ಫೈನಲ್ ಕನಸು ಜೀವಂತವಾಗಿದ್ದರೂ, ಉಳಿದ 7 ಪಂದ್ಯಗಳ ಪೈಕಿ ಕನಿಷ್ಠ 6ರಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ದುಬೈ: 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಿದ್ದು, ಇನ್ನು 33 ಪಂದ್ಯಗಳು ಉಳಿದಿವೆ. ಈ ಚಾಂಪಿಯನ್‌ಶಿಪ್ ಆಡುತ್ತಿರುವ 9 ತಂಡಗಳ ಪೈಕಿ 4 ತಂಡಗಳು ಹೆಚ್ಚೂ ಕಡಿಮೆ ಫೈನಲ್ ರೇಸ್‌ನಿಂದ ಹೊರಬಿದ್ದಿದ್ದು, ಉಳಿದ 5 ತಂಡಗಳು ಅಗ್ರ-2 ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಈ ಪೈಕಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ಗೆ ಫೈನಲ್‌ಗೇರಲು ಹೆಚ್ಚಿನ ಅವಕಾಶಗಳಿವೆ.
ಆಸ್ಟ್ರೇಲಿಯಾ ಮುಂಚೂಣಿ:
ಆಸ್ಟ್ರೇಲಿಯಾ ಈವರೆಗೆ 10 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆದ್ದು 2ರಲ್ಲಿ ಸೋತಿದೆ. ತಂಡ ಶೇ.80.00 ಗೆಲುವಿನ ದಾಖಲೆ ಹೊಂದಿದೆ. ಆಸೀಸ್‌ಗೆ ಇನ್ನೂ 12 ಪಂದ್ಯಗಳಿವೆ. ಈ ಪೈಕಿ 6ರಲ್ಲಿ ಗೆದ್ದರೂ ತಂಡ ಅಗ್ರ-2 ಸ್ಥಾನಗಳಲ್ಲಿ ಉಳಿದು ಫೈನಲ್‌ಗೇರಬಹುದು. ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 4, ದ.ಆಫ್ರಿಕಾದಲ್ಲಿ 3, ಭಾರತದಲ್ಲಿ 5 ಟೆಸ್ಟ್‌ಗಳನ್ನಾಡಲಿವೆ.
ದ.ಆಫ್ರಿಕಾಗೆ ಹೆಚ್ಚಿನ ಅವಕಾಶ:
ಹಾಲಿ ಚಾಂಪಿಯನ್ ದ.ಆಫ್ರಿಕಾ 4 ಟೆಸ್ಟ್ ಆಡಿದ್ದು, 3ರಲ್ಲಿ ಗೆದ್ದು 1 ಪಂದ್ಯ ಸೋತಿದೆ. ತಂಡಕ್ಕಿನ್ನು 10 ಪಂದ್ಯಗಳಿವೆ. ಈ ಪೈಕಿ 6ರಲ್ಲಿ ಗೆದ್ದರೂ ಫೈನಲ್‌ಗೇರಬಹುದು. 10 ಪಂದ್ಯಗಳ ಪೈಕಿ ಎಂಟನ್ನು ತವರಿನಲ್ಲೇ ಆಡಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಕಿವೀಸ್‌ಗೆ 7 ಜಯ ಅಗತ್ಯ:
2019-21ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ನ್ಯೂಜಿಲೆಂಡ್ ಈಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಬಾರಿ 6 ಟೆಸ್ಟ್ ಆಡಿರುವ ತಂಡ 4ರಲ್ಲಿ ಗೆದ್ದಿದ್ದು, ತಲಾ 1 ಸೋಲು, ಡ್ರಾ ಕಂಡಿದೆ. ತಂಡಕ್ಕೆ ಉಳಿದಿರುವ ಪಂದ್ಯಗಳು 10. ತಂಡಕ್ಕಿನ್ನು 6 ಅಥವಾ 7 ಪಂದ್ಯಗಳಲ್ಲಿ ಗೆಲುವು ಅಗತ್ಯವಿದೆ. ಆದರೆ ಈ ಪೈಕಿ ನಾಲ್ಕನ್ನು ಆಸ್ಟ್ರೇಲಿಯಾದಲ್ಲಿ ಆಡಲಿದ್ದು, ತಂಡದ ಹಾದಿ ಸುಲಭವಿಲ್ಲ.
ಬಾಂಗ್ಲಾಗೂ ಇದೆ ಚಾನ್ಸ್:
ಈ ಬಾರಿ ಅಂಕಪಟ್ಟಿಯಲ್ಲಿ ಅಚ್ಚರಿ ಎಂಬಂತೆ 4ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಕೂಡಾ ಫೈನಲ್ ರೇಸ್‌ನಲ್ಲಿದೆ. ತಂಡ ಆಡಿರುವ 6 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. ತಂಡಕ್ಕಿನ್ನು 6 ಪಂದ್ಯಗಳು ಉಳಿದಿದ್ದು, ಈ ಪೈಕಿ ತವರಿನಲ್ಲಿ 4 ಟೆಸ್ಟ್(ಇಂಗ್ಲೆಂಡ್, ವಿಂಡೀಸ್ ವಿರುದ್ಧ) ಆಡಲಿದೆ. ಈ ನಾಲ್ಕರ ಜೊತೆ ಮತ್ತೊಂದು ಪಂದ್ಯ ಗೆದ್ದರೆ ತಂಡಕ್ಕೆ ಫೈನಲ್ ಪ್ರವೇಶ ಭಾಗ್ಯ ಸಿಗಲಿದೆ.
ಫೈನಲ್‌ಗೇರುತ್ತಾ ಭಾರತ?:
ಲಂಕಾ ವಿರುದ್ಧ ಕೊಲಂಬೊ ಟೆಸ್ಟ್‌ನಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದರಿಂದ ಭಾರತಕ್ಕೆ ಹಿನ್ನಡೆಯಾಗಿದ್ದರೂ, ತಂಡದ ವಿಶ್ವ ಟೆಸ್ಟ್ ಫೈನಲ್ ಕನಸು ಇನ್ನೂ ಜೀವಂತವಾಗಿದೆ. ಭಾರತ 2025-27ರ ಆವೃತ್ತಿಯಲ್ಲಿ ಈವರೆಗೂ 11 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು, 4ರಲ್ಲಿ ಸೋತಿದೆ. 2 ಪಂದ್ಯಗಳು ಡ್ರಾಗೊಂಡಿವೆ. ತಂಡಕ್ಕಿನ್ನು 7 ಪಂದ್ಯಗಳು ಬಾಕಿಯಿದೆ. ನ್ಯೂಜಿಲೆಂಡ್‌ನಲ್ಲಿ 2, ಆಸೀಸ್ ವಿರುದ್ಧ ತವರಿನಲ್ಲಿ 5 ಪಂದ್ಯಗಳಿವೆ. ಈ ಪೈಕಿ 6ರಲ್ಲಿ ಗೆದ್ದು 1ರಲ್ಲಿ ಸೋತರೆ ತಂಡ ಗೆಲುವಿನ ದಾಖಲೆ ಶೇ.64.8 ಆಗಲಿದ್ದು, ಆ ಮೂಲಕ ಫೈನಲ್‌ಗೇರಬಹುದು. 7ರ ಪೈಕಿ 5ರಲ್ಲಿ ಗೆದ್ದರೆ ಇತರ ತಂಡಗಳ ಫಲಿತಾಂಶದ ಮೇಲೆ ಭಾರತದ ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.
ಸತತ 4ನೇ ಸಲವೂ ಇಂಗ್ಲೆಂಡ್ ತಂಡಕ್ಕಿಲ್ಲ ಫೈನಲ್ ಅವಕಾಶ?
ಈ ಹಿಂದಿನ 3 ಆವೃತ್ತಿಗಳಲ್ಲೂ ಫೈನಲ್‌ಗೇರಲು ವಿಫಲವಾಗಿದ್ದ ಇಂಗ್ಲೆಂಡ್ ತಂಡ ಈ ಬಾರಿಯೂ ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸುವ ಸಾಧ್ಯತೆ ಹೆಚ್ಚು. ತಂಡ 14 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು, 8ರಲ್ಲಿ ಸೋತಿದೆ. ಉಳಿದ 7ರಲ್ಲಿ ಗೆದ್ದರೂ ಫೈನಲ್‌ಗೇರಲು ಸಾಕಾಗುವುದಿಲ್ಲ.


