ಗಣೇಶ ಚತುರ್ಥಿ ಆಚರಣೆಯಲ್ಲಿ ಕಾಣಿಸಿಕೊಂಡ ನಟಿ ಕತ್ರಿನಾ ಕೈಫ್ ಅವರ ತೂಕ ಹೆಚ್ಚಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬಾಡಿ ಷೇಮಿಂಗ್ ಮಾಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ರಮ್ಯಾ, ಮಹಿಳೆಯ ದೇಹದ ಬದಲಾವಣೆ ಸಹಜ ಪ್ರಕ್ರಿಯೆ ಎಂದು ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ನಟಿಯರು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವವರೇ ಬಹುತೇಕ ಮಂದಿ. ಇದೇ ಕಾರಣಕ್ಕೆ ಹಲವಾರು ನಟಿಯರು ಬಾಡಿಷೇಮಿಂಗ್ ಅನುಭವಿಸುವುದು ಇದೆ. ಓರ್ವ ಮಹಿಳೆ ಅಮ್ಮನಾದ ಮೇಲೆ ಸಹಜವಾಗಿ ತೂಕ ಹೆಚ್ಚಾಗುತ್ತದೆ. ಕಾಲ ಕ್ರಮೇಣ ಕೆಲವರು, ಯೋಗ, ಧ್ಯಾನ, ಡಯೆಟ್ ಇತ್ಯಾದಿಗಳ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಇದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಆದರೆ ಓರ್ವ ಹೆಣ್ಣಿನ ದೇಹದ ಬಗ್ಗೆ ಅದರಲ್ಲಿಯೂ ಸೆಲೆಬ್ರಿಟಿಗಳ ಬಗ್ಗೆ ಟೀಕೆ ಮಾಡಿ ವಿಕೃತ ಸಂತೋಷ ಅನುಭವಿಸುವವರು ಕೆಲವರು. ಅದೇ ರೀತಿ ಇದೀಗ, ನಟಿ ಕತ್ರಿನಾ ಕೈಫ್ಗೂ ಆಗಿದೆ.
ಇತ್ತೀಚೆಗೆ ನಡೆದ ಮುಕೇಶ್ ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. 2025ರ ನವೆಂಬರ್ನಲ್ಲಿ ಗಂಡು ಮಗು ವಿಹಾನ್ಗೆ ಜನ್ಮ ನೀಡಿದ್ದ ಕತ್ರಿನಾ ಅವರ ತೂಕ ಸಹಜವಾಗಿ ಹೆಚ್ಚಾಗಿದೆ. ಮುಖದ ಬದಲಾವಣೆಯೂ ಆಗಿದೆ. ಇದರಿಂದಾಗಿ ಕೆಲವು ವಿಕೃತ ಮನಸ್ಸುಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ 'ಹಳೆಯ ಮತ್ತು ಇಂದಿನ' ಫೋಟೋಗಳನ್ನು ಹೋಲಿಸಿ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬೇರೆಯವರನ್ನು ಟೀಕೆ ಮಾಡುತ್ತಲೇ, ಅವರ ಬಾಡಿ ಷೇಮಿಂಗ್ ಮಾಡುತ್ತಲೇ ತಮ್ಮ ಕೆಟ್ಟ ಮನಸ್ಥಿತಿಯನ್ನು ತೋರುವ ಇಂಥವರಿಂದ ಅದೆಷ್ಟೋ ಮಂದಿ ನೋವು ಅನುಭವಿಸುವುದು ಇದೆ.
ರಮ್ಯಾ ಕಿಡಿ
ಇದೀಗ, ಕತ್ರಿನಾ ಕೈಫ್ ಅವರನ್ನು ಟ್ರೋಲ್ ಮಾಡುತ್ತಿರುವವರ ಬಗ್ಗೆ ಇದಾಗಲೇ ವಿವಿಧ ಕ್ಷೇತ್ರಗಳ ದಿಗ್ಗಜರು ಛೀಮಾರಿ ಹಾಕಿದ್ದಾರೆ. ಇದೀಗ ನಟಿ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಟೀಕೆ ಮಾಡುತ್ತಿರುವವರ ಚಳಿ ಬಿಡಿಸಿದ್ದಾರೆ. ಕತ್ರಿನಾ ಕೈಫ್ ಅವರ ಫೋಟೋ ಶೇರ್ ಮಾಡಿದ್ದ ಹಲವರು ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿರುವ ನಟಿ, ಮಹಿಳೆಯ ಅತ್ಯುತ್ತಮ ಹಂತ ಎನ್ನುವ ಮಾತು ಆಕೆಗೆ ಮುಕ್ತಾಯದ ದಿನ ಇದೆ ಎನ್ನುವಂತೆ ಬಿಂಬಿಸುತ್ತದೆ. ಅತ್ಯುತ್ತಮ ಹಂತವೆಂದರೆ ಕೇವಲ ಮ್ಯಾಗಜೀನ್ ಮುಖಪುಟದ ಮಾಡೆಲ್‌ನಂತೆ ಕಾಣುವ ಕೆಲವೇ ವರ್ಷಗಳು ಎಂದು ನಿರ್ಧರಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ವಿವಿಧ ಘಟ್ಟಗಳಲ್ಲಿ ದೇಹ ಬದಲಾವಣೆ
ಮಹಿಳೆಗೆ ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಹಾಗೂ ಜೀವನದ ವಿವಿಧ ಘಟ್ಟಗಳಲ್ಲಿ ದೇಹ ಬದಲಾಗುತ್ತದೆ. ಅದು ಅವನತಿಯಲ್ಲ, ಬದಲಿಗೆ ಅದು ಬದುಕುವ ಕ್ರಮವಾಗಿದೆ. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.
ಇನ್ನು, "ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ" ಎಂದು ಹೇಳುವವರಿಗೆ ಕೇಳುತ್ತೇನೆ: ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ? ಅಥವಾ "ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ" ಎನ್ನುವವರು, ಮಗುವಾಗದಿದ್ದರೆ ಆ ತೂಕ ಸರಿಯಲ್ಲ ಎಂದು ಭಾವಿಸುತ್ತಾರೆಯೇ? ಇದ್ಯಾವ ರೀತಿಯ ಅರ್ಥಹೀನ ಸಮರ್ಥನೆ? ಎಂದು ಕಿಡಿಕಾರಿದ್ದಾರೆ.
ಒಬ್ಬ ಮಹಿಳೆಯ ದೇಹವನ್ನು ಅವಮಾನಿಸಬಾರದು ಎನ್ನಲು ಬ್ಯಾಂಕ್ ಬ್ಯಾಲೆನ್ಸ್‌ನ ಅಗತ್ಯವಿಲ್ಲ ಅಥವಾ ಅದಕ್ಕೊಂದು ನಿರ್ದಿಷ್ಟ ಕಾರಣವೂ ಬೇಕಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.


