ಸರ್ಕಾರದ ಸೇವೆಯಲ್ಲಿ ದುಡಿದು ಹಣ ಮಾಡಿಕೊಂಡು, ಸೇವೆಯಲ್ಲಿರುವಾಗಲೇ ಚುನಾವನೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದೀರಿ.ಇದೀಗ ಚುನಾವಣೆಯಲ್ಲಿ ಸೋಲುಂಡ ಬಳಿಕ ಪುನಃ ವಾಪಸ್ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಿ ಎಂದರೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಉದ್ಯೋಗಿಯೊಬ್ಬರು, ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ‘ನನ್ನ ರಾಜೀನಾಮೆ ವಾಪಸ್ ಪಡೆಯುತ್ತೇನೆ, ಮತ್ತೆ ಕೆಲಸ ಕೊಡಿ’ ಎಂದು ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾಯವ್ಯ ರೈಲ್ವೆ ವಿಭಾಗದಲ್ಲಿ (North Western Railway) ಹಿರಿಯ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನೀರಜ್ ಬಿಷ್ಣೋಯ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿ ಸಂಪೂರ್ಣವಾಗಿ ವಜಾಗೊಳಿಸಿದೆ. 'ಚುನಾವಣಾ ಸೋಲು ಎಂಬುದು ಸೇವಾ ನಿಯಮಾವಳಿಗಳ ಅಡಿಯಲ್ಲಿ ರಾಜೀನಾಮೆಯನ್ನು ಹಿಂಪಡೆಯಲು ಯಾವುದೇ ಸಕಾರಣವಾಗಲು ಸಾಧ್ಯವಿಲ್ಲ' ಎಂದು ಹೈಕೋರ್ಟ್ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?
ನೀರಜ್ ಬಿಷ್ಣೋಯ್ ಅವರು 2023ರ ಅಕ್ಟೋಬರ್ 10ರಂದು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಹಿರಿಯ ಆಡಿಟರ್ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದರು. ರೈಲ್ವೆ ಇಲಾಖೆಯು ನಿಯಮಾನುಸಾರ ಅವರ ರಾಜೀನಾಮೆಯನ್ನು ಪರಿಶೀಲಿಸಿ, ನವೆಂಬರ್ 1ರಂದು ಅಧಿಕೃತವಾಗಿ ಅಂಗೀಕರಿಸಿತ್ತು. ಬಳಿಕ ಬಹುಜನ ಸಮಾಜ ಪಕ್ಷದ (BSP) ಅಭ್ಯರ್ಥಿಯಾಗಿ ರತ್ನಗಢ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಬಿಷ್ಣೋಯ್, ಚುನಾವಣೆಯಲ್ಲಿ ಸೋಲು ಕಂಡರು. ಸೋಲಿನ ಬಳಿಕ ಅಂದರೆ 2024ರ ಜನವರಿ 1ರಂದು, ‘ನನ್ನ ರಾಜೀನಾಮೆಯನ್ನು ಹಿಂಪಡೆದು ನನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಿ’ ಎಂದು ರೈಲ್ವೆ ಇಲಾಖೆಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ತಿರಸ್ಕರಿಸಿದ್ದ ರೈಲ್ವೆ ಇಲಾಖೆ
ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಮ್ಮೆ ಅಂಗೀಕೃತವಾದ ರಾಜೀನಾಮೆಯನ್ನು ಹೀಗೆ ಹಿಂಪಡೆಯಲು ಅವಕಾಶವಿಲ್ಲ ಎಂದು ತಿಳಿಸಿ ರೈಲ್ವೆ ಇಲಾಖೆಯು ಅವರ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಬಿಷ್ಣೋಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅರ್ಜಿದಾರರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಇಲಾಖೆಯು ಅದನ್ನು ಈಗಾಗಲೇ ಅಂಗೀಕರಿಸಿದೆ. ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಮತ್ತೆ ಸರ್ಕಾರಿ ಹುದ್ದೆಗೆ ಮರಳುವುದು ಸೇವಾ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ರದ್ದುಗೊಳಿಸಿದೆ.


