ಹಾಸನದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಿದ್ದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣ ಒಬ್ಬರೇ ವಾಸಿಸುತ್ತಿದ್ದ ಅವರ ಸಾವು, ಕಚೇರಿ ಸಿಬ್ಬಂದಿ ಕರೆ ಮಾಡಿದಾಗ ಬೆಳಕಿಗೆ ಬಂದಿದೆ.

ಹಾಸನ (ಸೆ.11): ಇಡೀ ಕುಟುಂಬವು ಚೆನ್ನಾಗಿರಲೆಂದು ಬೆಂಗಳೂರಿನಲ್ಲಿ ಬಿಟ್ಟು ಸರ್ಕಾರಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸವಾಗಿದ್ದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಾಗಿದ್ದ ಮನೆಯಲ್ಲಿ ಅನಾಥವಾಗಿ ಶವವಾಗಿದ್ದಾರೆ. ಜೀವನ ಪೂರ್ತಿ ಕುಟುಂಬ ನೆಮ್ಮದಿಗಾಗಿ ದುಡಿಯುತ್ತಿದ್ದ ಸರ್ಕಾರಿ ಅಧಿಕಾರಿ ತಮ್ಮ ಸಾವಿನ ಕೊನೆಯ ಕ್ಷಣಗಳಲ್ಲಿ ಕುಟುಂಬದ ಒಬ್ಬರೇ ಒಬ್ಬ ಸದಸ್ಯರೂ ಆಸರೆಯೂ ಸಿಗಲಿಲ್ಲ.

ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ (55) ಅವರು ತೀವ್ರ ಹೃದಯಾಘಾತದಿಂದ ಏಕಾಏಕಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.

ಫೋನ್ ರಿಸೀವ್ ಮಾಡದಿದ್ದಾಗ ಬೆಳಕಿಗೆ ಬಂತು ದುರಂತ:

ಡಾ.ವೆಂಕಟೇಶ್ ಅವರು ಎಂದಿನಂತೆ ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿ ತಮ್ಮ ಬಾಡಿಗೆ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಅಗತ್ಯ ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಸಕಲೇಶಪುರದಲ್ಲಿರುವ ಅವರ ಮನೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಡಾ.ವೆಂಕಟೇಶ್ ಅವರು ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪರಿಶೀಲಿಸಿದಾಗ, ಅವರು ರಾತ್ರಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಮೂಲತಃ ಚಿಕ್ಕಬಳ್ಳಾಪುರದವರು:

ಮೃತ ಡಾ.ವೆಂಕಟೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಸಕಲೇಶಪುರ ಪಟ್ಟಣದಲ್ಲಿ ಒಬ್ಬರೇ ವಾಸವಿದ್ದರು.

ಕಂಬನಿ ಮಿಡಿದ ಸಿಬ್ಬಂದಿ, ರೈತರು:

ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.