ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 80ರ ದಶಕದ ಫೋಟೋ ಟ್ರೆಂಡ್‌ ಅಪಾಯಕಾರಿಯಾಗಿದ್ದು, ಅಪರಿಚಿತ ಆ್ಯಪ್‌ಗಳನ್ನು ಬಳಸದಂತೆ ಪೊಲೀಸರು ಎಚ್ಚರಿಸಿದ್ದಾರೆ. ಈ ಆ್ಯಪ್‌ಗಳ ಮೂಲಕ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಕದಿಯುವ ಸೈಬರ್ ವಂಚಕರು, ಆರ್ಥಿಕ ವಂಚನೆ ಅಥವಾ ಡೀಪ್‌ಫೇಕ್‌ ನಂತಹ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಿಧ ಆ್ಯಪ್‌ಗಳನ್ನು ಬಳಸಿಕೊಂಡು ತಮ್ಮ ಇಂದಿನ ಫೋಟೋಗಳನ್ನು 1980ರ ದಶಕದ ಟ್ರೆಂಡ್‌ಗೆ ಪರಿವರ್ತಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವವರು ಸೈಬರ್ ವಂಚಕರಿಂದ ಎಚ್ಚರಿಕೆಯಿಂದಿರುವಂತೆ ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ಸಮಯದಿಂದ 80ರ ದಶಕದ ಫೋಟೋ ಟ್ರೆಂಡ್‌ ಹೊಸ ತಲೆಮಾರಿನ ಯುವಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಜನ ತಮ್ಮ ಫೋಟೋಗಳನ್ನು ಹಳೆಯ ಶೈಲಿಗೆ ಪರಿವರ್ತಿಸಲು ಅಪರಿಚಿತ ಅಪ್ಲಿಕೇಶನ್‌ಗಳು, ಎಐ ಆಧಾರಿತ ಫೋಟೋ ಎಡಿಟಿಂಗ್‌ ವೇದಿಕೆ ಅಥವಾ ಲಿಂಕ್‌ಗಳನ್ನು ಬಳಸಿದರೆ ವೈಯಕ್ತಿಕ ಮಾಹಿತಿ ಸೋರಿಕೆ ಆಗಬಹುದು. ಈ ಮಾಹಿತಿ ಬಳಸಿ ಸೈಬರ್ ಖದೀಮರು ಹಣಕಾಸು ವಂಚನೆ ಅಥವಾ ಇತರ ದುಷ್ಕೃತ್ಯಗಳನ್ನು ಎಸಗಬಹುದು ಎಂದು ಪೊಲೀಸರು ಹೇಳಿದ್ದಾರೆ.

ನಿಮ್ಮ ಫೋಟೋ, ಮೊಬೈಲ್‌ ಸಂಖ್ಯೆ, ಇ-ಮೇಲ್‌ ಹೆಸರು, ಪಾಸ್‌ವರ್ಡ್‌ ಇನ್ನಿತರ ವೈಯಕ್ತಿಕ ದಾಖಲೆ ನೀಡಿದರೆ ಬ್ಯಾಂಕ್‌ ಖಾತೆಯಿಂದ ಹಣ ಮಾಯವಾಗುತ್ತದೆ. ಹೀಗಾಗಿ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಅಪರಿಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಕ್ಷಣದ ಟ್ರೆಂಡ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ ಅಪಾಯಕ್ಕೆ ಸಿಲುಕಬಹುದು. ಸೈಬರ್ ವಂಚನೆಯಿಂದ ಪಾರಾಗಲು ಜಾಗರೂಕರಾಗಿರುವುದು ಮುಖ್ಯ ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.

ದತ್ತಾಂಶ ವಂಚಕರ ಕೈ ಸೇರುವ ಸಾಧ್ಯತೆ:

ಫೋಟೋಗಳನ್ನು ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಬಳಕೆದಾರರ ವೈಯಕ್ತಿಕ ದತ್ತಾಂಶ ಹಾಗೂ ಮುಖದ ಮಾಹಿತಿ ಸೈಬರ್‌ ವಂಚಕರ ಕೈಸೇರುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಡೀಪ್‌ಫೇಕ್ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮುಖದ ಡೇಟಾ ಎಲ್ಲಿ ಮತ್ತು ಯಾರಿಗೆ ನೀಡುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರ ವಹಿಸುವಂತೆ ಸೈಬರ್‌ ತಜ್ಞರು ಸಲಹೆ ನೀಡಿದ್ದಾರೆ.

ಹೊಸ ಟ್ರೆಂಡ್‌ ಎಂಬ ಕಾರಣಕ್ಕೆ ಕಣ್ಣುಮುಚ್ಚಿ ಯಾವುದೇ ಆ್ಯಪ್‌ಗೆ ವೈಯಕ್ತಿಕ ಫೋಟೋಗಗಳನ್ನು ಅಪ್‌ಲೋಡ್‌ ಮಾಡಬೇಡಿ. ಆ್ಯಪ್‌ನ ವಿಶ್ವಾಸಾರ್ಹತೆ ಮತ್ತು ಗೌಪ್ಯತೆ ನಿಯಮ ಪರಿಶೀಲಿಸಿದ ಬಳಿಕವೇ ಬಳಸಬೇಕು. ಒಂದು ಕ್ಷಣದ ವೈರಲ್‌ ಕ್ರೇಜ್‌ಗೆ ಮುಂದಿನ ದಿನಗಳಲ್ಲಿ ಸೈಬರ್‌ ವಂಚನೆ ತುತ್ತಾಗಬೇಕಾದೀತು ಎಂದು ಪೊಲೀಸರು ಎಚ್ಚರಿಸಿದ್ದಾರೆ.