ಆಧಾರ್-ಪಾನ್‌ನಲ್ಲಿ ಮುಸ್ಲಿಂ, ಆದ್ರೆ ಹಿಂದೂ ಮಠಕ್ಕೆ ಪೀಠಾಧಿಪತಿ! ಸ್ವಾಮೀಜಿಯ ಖಾಸಗಿ ವಿಡಿಯೋ ವೈರಲ್!

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಕ್ತರೊಬ್ಬರು ಕಟ್ಟಿಸಿದ ಮಠದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಸ್ವಾಮೀಜಿಯಾಗಿ ನಟಿಸಿ ಪೀಠಾಧಿಪತಿಯಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ವಿಡಿಯೋಗಳು ಮತ್ತು ದಾಖಲೆಗಳಿಂದ ಸತ್ಯ ಬಯಲಾಗಿದ್ದು, ಭಕ್ತರು ಆತನನ್ನು ಮಠದಿಂದ ಹೊರಹಾಕಿದ್ದಾರೆ.

Share this Video
  • FB
  • Linkdin
  • Whatsapp

ಚಾಮರಾಜನಗರ (ಆ.07): ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಕ್ತರೊಬ್ಬರು ತಮ್ಮ ಊರಿನಲ್ಲಿ ಭಕ್ತಿಯಿಂದ ಕಟ್ಟಿಸಿದ ಹಿಂದೂ ಮಠವೊಂದರಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ತಾವು ಹುಡುಕುತ್ತಿದ್ದ ಒಳ್ಳೆಯ ಸ್ವಾಮೀಜಿ ಸಿಕ್ಕರೆಂದು ಭಾವಿಸಿ ಮಠದ ಪೀಠವನ್ನು ಅಲಂಕರಿಸಿದ ವ್ಯಕ್ತಿಯೊಬ್ಬರು, ಮುಸ್ಲಿಂ ಎಂಬುದು ತಿಳಿದು ಬೆಚ್ಚಿ ಬಿದ್ದಿದ್ದಾರೆ. ಇದೀಗ ಆತನಿಗೆ ಮಠದಿಂದ ಗೇಟ್‌ಪಾಸ್ ನೀಡಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಸವಣ್ಣನ ಭಕ್ತನಾಗಿ ಮಠ ಸೇರಿದ ಮೊಹಮ್ಮದ್ ನಿಸಾರ್:
ಚಾಮರಾಜನಗರದ ಮಠವೊಂದರಲ್ಲಿ ಪೀಠಾಧಿಪತಿಯಾಗಿದ್ದ ನಿಜಲಿಂಗ ಸ್ವಾಮೀಜಿ ಎಂಬ ವ್ಯಕ್ತಿ, ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಹಮ್ಮದ್ ನಿಸಾರ್ ಎಂದು ತಿಳಿದುಬಂದಿದೆ. ಆತ ಬಾಲ್ಯದಿಂದಲೇ ಬಸವಣ್ಣನ ವಚನಗಳ ಬಗ್ಗೆ ಆಸಕ್ತಿ ಹೊಂದಿದ್ದ. ಉರ್ದು ಶಾಲೆಯಲ್ಲಿ ಓದಿದರೂ ಬಸವಣ್ಣನವರ ವಚನಗಳನ್ನು ಸರಾಗವಾಗಿ ಹೇಳುತ್ತಿದ್ದ. ಈ ಆಸಕ್ತಿಯಿಂದಲೇ ಆತ ಬೀದರ್‌ನ ಬಸವಕಲ್ಯಾಣದಲ್ಲಿರುವ ಮಠವೊಂದನ್ನು ಸೇರಿಕೊಂಡಿದ್ದ. ಅಲ್ಲಿ ಬಸವ ಪ್ರಭು ಶ್ರೀಗಳಿಂದ ಲಿಂಗದೀಕ್ಷೆ ಪಡೆದು ಧರ್ಮ ಪ್ರಚಾರಕನಾಗಿ ಊರೂರು ಸುತ್ತುತ್ತಿದ್ದ.

ಖಾಸಗಿ ವಿಡಿಯೋಗಳು ಮತ್ತು ವೈಯಕ್ತಿಕ ದಾಖಲೆಗಳಿಂದ ಬಯಲಾದ ಸತ್ಯ
ಚಾಮರಾಜನಗರಕ್ಕೆ ಬಂದ ನಂತರ, ಆತನ ನಿಜಬದಿಯ ಬಗ್ಗೆ ಅನುಮಾನಗಳು ಶುರುವಾದವು. ಆತನ ಮೊಬೈಲ್‌ನಲ್ಲಿ ಮಠಕ್ಕೆ ಸೇರುವ ಮೊದಲು ಚಿತ್ರೀಕರಿಸಿದ ಕೆಲವು ಖಾಸಗಿ ವಿಡಿಯೋಗಳು ಬಹಿರಂಗವಾದವು. ಕೈಯಲ್ಲಿ ಬಿಯರ್ ಹಿಡಿದು, ಕಬಾಬ್ ಪಕ್ಕದಲ್ಲೇ ಅರೆಬೆತ್ತಲೆ ಯುವತಿಯರೊಂದಿಗೆ ಇರುವ ವಿಡಿಯೋಗಳು ಅನುಮಾನಕ್ಕೆ ಕಾರಣವಾದವು. ಇದಕ್ಕಿಂತ ಹೆಚ್ಚಾಗಿ, ಆತನ ಆಧಾರ್ ಮತ್ತು ಪಾನ್ ಕಾರ್ಡ್‌ಗಳಲ್ಲಿಯೂ ಮೊಹಮ್ಮದ್ ನಿಸಾರ್ ಎಂಬ ಹೆಸರು ಮತ್ತು ಮುಸ್ಲಿಂ ಧರ್ಮದ ಉಲ್ಲೇಖವಿರುವುದು ಬೆಳಕಿಗೆ ಬಂದಿತು.

ಮಠದಿಂದ ವಾಪಸ್ ಕಳುಹಿಸಿದ ಭಕ್ತರು
ಒಂದೂವರೆ ತಿಂಗಳ ಕಾಲ ನಿಜಲಿಂಗ ಸ್ವಾಮೀಜಿಯನ್ನೇ ದೇವರು ಎಂದು ನಂಬಿದ್ದ ಭಕ್ತರು, ಈ ಸಂಗತಿಗಳು ಬಹಿರಂಗವಾದ ಬಳಿಕ ಆಘಾತಕ್ಕೊಳಗಾದರು. ಈತ ಹಿಂದೂ ಅಲ್ಲ ಎಂದು ನಿರ್ಧರಿಸಿದ ಭಕ್ತರು, ಆತನಿಗೆ ಮಠದಿಂದ ಗೇಟ್‌ಪಾಸ್ ನೀಡಿ ಆತ ಬಂದ ಊರಿಗೇ ವಾಪಸ್ ಕಳುಹಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಿಜಲಿಂಗ ಸ್ವಾಮೀಜಿಗೆ ದೀಕ್ಷೆ ನೀಡಿದ ಹಿರಿಯ ಸ್ವಾಮೀಜಿಗಳು ಮತ್ತು ಆತನ ತಾಯಿಯ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಈ ಪ್ರಕರಣ ಎಲ್ಲಿಗೆ ತಲುಪಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

Related Video