SSLC ಫೇಲಾದರೂ ವಿಜ್ಞಾನಿಯಾದ ಮಣ್ಣಿನ ಮಗ: ಓದದ ರೈತನ ಕೋಟಿ ಆದಾಯದ ಗುಟ್ಟು!

ರಾಯಚೂರಿನ ಮಟ್ಟೂರು ಗ್ರಾಮದ 10ನೇ ತರಗತಿ ಫೇಲಾದ ರೈತ ಮಲ್ಲೇಶ್ ಗೌಡ ಪಾಟೀಲ್, ಛಲ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳಿಂದ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ರೇಷ್ಮೆ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಕುರಿ ಸಾಕಾಣಿಕೆಯಂತಹ ಸಮಗ್ರ ಕೃಷಿ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ರಾಯಚೂರು (ಸೆ.23): ಭಾರತದ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಇಂದಿಗೂ ರೈತರು ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುತ್ತಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಟ್ಟೂರು ಗ್ರಾಮದ ರೈತ ಮಲ್ಲೇಶ್ ಗೌಡ ಪಾಟೀಲ್, 10ನೇ ತರಗತಿಯಲ್ಲಿ ಅನುತ್ತೀರ್ಣರಾದರೂ, ತಮ್ಮ ಸ್ವಂತ ಪ್ರಯತ್ನ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳಿಂದ ಲಕ್ಷಾಂತರ ರೂಪಾಯಿ ಗಳಿಸಿ, ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ರೈತ ವಿಜ್ಞಾನಿ ಮಲ್ಲೇಶ್ ಗೌಡ ಪಾಟೀಲ್ ಜೀವನ ಪಯಣ:

69 ವರ್ಷ ವಯಸ್ಸಿನ ಮಲ್ಲೇಶ್ ಗೌಡ ಪಾಟೀಲ್ ಅವರಿಗೆ ಕೃಷಿ ಎಂದರೆ ಅಪಾರ ಒಲವು. 1973ರಲ್ಲಿ ಅವರ ತಂದೆ ಅವರನ್ನು ಧಾರವಾಡದ ಆಯುರ್ವೇದ ಕಾಲೇಜಿಗೆ ಸೇರಿಸಿದ್ದರು. ಆದರೆ ಕೃಷಿಯ ಮೇಲಿನ ಅವರ ಆಸಕ್ತಿಯಿಂದಾಗಿ ಕೇವಲ ಮೂರು ತಿಂಗಳಲ್ಲಿ ಕಾಲೇಜು ಬಿಟ್ಟು ತಮ್ಮ ಊರಿಗೆ ಮರಳಿದರು. ಆ ಸಮಯದಲ್ಲಿ ಮಳೆಯನ್ನೇ ಅವಲಂಬಿಸಿದ್ದ ಕೃಷಿಯನ್ನು ಕಂಡು, ನೀರಾವರಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನೀರಾವರಿ ಕುರಿತು ತರಬೇತಿ ಪಡೆಯಲು ಅವರು ಸಿಂಧನೂರು ತಾಲ್ಲೂಕಿನ ದಡೇಸೂಗೂರು ಗ್ರಾಮದ ರೈತ ಮಕ್ಕಳ ತರಬೇತಿ ಶಾಲೆಗೆ ಸೇರಿ ಒಂದು ವರ್ಷ ತರಬೇತಿ ಪಡೆದರು. ತರಬೇತಿಯ ನಂತರ, ತಮ್ಮ 41 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಲು ನಿರ್ಧರಿಸಿದರು. ಆರಂಭದಲ್ಲಿ ಹಲವು ಸಮಸ್ಯೆಗಳು ಮತ್ತು ನಷ್ಟಗಳನ್ನು ಎದುರಿಸಿದರೂ, ತಮ್ಮ ಛಲದಿಂದ ಹಿಮ್ಮೆಟ್ಟಲಿಲ್ಲ.

ಕೃಷಿಯಲ್ಲಿ ವಿನೂತನ ಪ್ರಯೋಗಗಳು: ತಮ್ಮ ಜಮೀನಿನಲ್ಲಿ ಬಾವಿ ತೋಡಿ ನೀರಾವರಿ ಆರಂಭಿಸಿ, ವರಲಕ್ಷ್ಮಿ ಹತ್ತಿ ಬೆಳೆದು ಉತ್ತಮ ಲಾಭ ಗಳಿಸಿದರು. ಇದರಿಂದ ಪ್ರೇರಿತರಾಗಿ 1978ರಲ್ಲಿ ರೇಷ್ಮೆ ಕೃಷಿಯನ್ನು ಆರಂಭಿಸಿದರು. ವಾರ್ಷಿಕ 4684 ಕೆಜಿ ರೇಷ್ಮೆಗೂಡು ಉತ್ಪಾದಿಸಿ, ಕಲ್ಯಾಣ ಕರ್ನಾಟಕದಲ್ಲೇ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರೈತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೃಷಿ ಪ್ರವಾಸದ ಸಂದರ್ಭದಲ್ಲಿ ಹೈನುಗಾರಿಕೆ ಬಗ್ಗೆ ತಿಳಿದು, ಹರಿಯಾಣದಿಂದ ಎಮ್ಮೆಗಳನ್ನು ತರಿಸಿ, ನಿತ್ಯ 150 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಜೊತೆಗೆ ಹೈನುಗಾರರಿಗೆ ಅನುಕೂಲವಾಗುವಂತೆ 12 ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿದ್ದಾರೆ. ಕೃಷಿ ಮತ್ತು ಹೈನುಗಾರಿಕೆ ಜೊತೆಗೆ, ಜಾನುವಾರುಗಳಿಗಾಗಿ ಕೊಯಮತ್ತೂರು-3, ಡಿಎಚ್‌ಆರ್, ನೇಪಿಯರ್‌ನಂತಹ ಮೇವಿನ ತಳಿಗಳನ್ನು ಬೆಳೆಸಿ, ಇತರೆ ರೈತರಿಗೂ ಉಚಿತವಾಗಿ ಸಸಿಗಳನ್ನು ನೀಡುತ್ತಿದ್ದಾರೆ.

ವೈವಿಧ್ಯಮಯ ಸಮಗ್ರ ಕೃಷಿ:

ಮಲ್ಲೇಶ್ ಗೌಡ ಅವರು ಕೇವಲ ರೇಷ್ಮೆ ಮತ್ತು ಹೈನುಗಾರಿಕೆಗೆ ಸೀಮಿತವಾಗಿಲ್ಲ. ದಾಳಿಂಬೆ, ಪಪ್ಪಾಯಿ, ನಿಂಬೆ, ತರಕಾರಿ, ಹುಣಸೆ ಮತ್ತು ಸಾಗುವಾನಿ ಮರಗಳನ್ನೂ ಸಹ ಬೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮ ಜಮೀನಿನಲ್ಲಿ ₹12 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿ, ಅದರಲ್ಲಿ ಕಾಟ್ಲಾ ಮತ್ತು ರೋಹು ಮೀನು ಸಾಕಾಣಿಕೆ ಮಾಡಿ, ಹೈದರಾಬಾದ್ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ, ₹1 ಕೋಟಿ ವೆಚ್ಚದ ಯೋಜನೆ ಮೂಲಕ 500 ಕುರಿಗಳು ಮತ್ತು 25 ಟಗರುಗಳನ್ನು ಸಾಕಾಣಿಕೆ ಮಾಡುತ್ತಿದ್ದು, ₹50 ಲಕ್ಷ ಸಬ್ಸಿಡಿ ಪಡೆದಿದ್ದಾರೆ. ಜೊತೆಗೆ, 1000 ನಾಟಿ ಕೋಳಿಗಳನ್ನೂ ಸಾಕುತ್ತಿದ್ದು, ಈ ಯೋಜನೆಗೆ ₹25 ಲಕ್ಷ ಸಬ್ಸಿಡಿ ಪಡೆದಿದ್ದಾರೆ.

ಯುವ ರೈತರಿಗೆ ಆದರ್ಶ: 10ನೇ ತರಗತಿ ಅನುತ್ತೀರ್ಣರಾಗಿದ್ದರೂ, ಮಲ್ಲೇಶ್ ಗೌಡರು ತಮ್ಮ ಅನುಭವ ಮತ್ತು ಪ್ರಯೋಗಶೀಲತೆಯಿಂದ ಕೃಷಿ ವಿಜ್ಞಾನಿಯ ಮಟ್ಟಕ್ಕೆ ಏರಿದ್ದಾರೆ. ಅವರ ಜಮೀನಿನಲ್ಲಿ ನಿರ್ಮಿಸಿರುವ ನೀರು ಇಂಗುವ ಗುಂಡಿಗಳು, ನೈಸರ್ಗಿಕ ಕೆರೆ ಮತ್ತು ಇತರೆ ವೈಜ್ಞಾನಿಕ ಪದ್ಧತಿಗಳು ಕೃಷಿ ಅಧಿಕಾರಿಗಳನ್ನೂ ಬೆರಗುಗೊಳಿಸುತ್ತಿವೆ. ಕೃಷಿ ಉಪನಿರ್ದೇಶಕ ಪ್ರಕಾಶ್ ಚವ್ಹಾಣ್ ಅವರು ಕೂಡ ಮಲ್ಲೇಶ್ ಗೌಡರ ಸಮಗ್ರ ಕೃಷಿ ಪದ್ಧತಿಯನ್ನು ಪ್ರಶಂಸಿಸಿದ್ದಾರೆ. ತಮ್ಮ 50 ವರ್ಷಗಳ ಕೃಷಿ ಪಯಣದಲ್ಲಿ ಮಲ್ಲೇಶ್ ಗೌಡರು, ಹಗಲು-ಇರುಳು ಎನ್ನದೆ ಶ್ರಮಿಸಿ, ಬರಡು ಭೂಮಿಯನ್ನು ಹಸಿರು ತೋಪನ್ನಾಗಿ ಪರಿವರ್ತಿಸಿದ್ದಾರೆ. ಅವರ ಈ ಸಾಧನೆ ಯುವ ಪೀಳಿಗೆಗೆ ಮತ್ತು ಎಲ್ಲ ರೈತ ಸಮುದಾಯಕ್ಕೆ ಒಂದು ದೊಡ್ಡ ಪ್ರೇರಣೆಯಾಗಿದೆ.

Related Video