
ಕಳ್ಳರ ಗೋಲ್ಡ್ ಬ್ಯುಸಿನೆಸ್: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
ಮೈಸೂರಿನ ಹುಣಸೂರು ಪಟ್ಟಣದಲ್ಲಿ, ಐವರು ದರೋಡೆಕೋರರು ಸಿನಿಮಾ ಶೈಲಿಯಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಕೇವಲ ಐದು ನಿಮಿಷಗಳಲ್ಲಿ 8 ಕೆಜಿಗೂ ಹೆಚ್ಚು ಚಿನ್ನವನ್ನು ದೋಚಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಇಂತಹ ಪ್ರಕರಣಗಳು ದರೋಡೆಕೋರರಿಗೆ ಹೊಸ ವ್ಯವಹಾರದಂತೆ ನಡೆಯುತ್ತಿವೆ.
ಮೈಸೂರು (ಡಿ.30): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಟಮಟ ಮಧ್ಯಾಹ್ನ ಜನರನ್ನು ಬೆಚ್ಚಿಬೀಳಿಸುವಂತಹ ಅತಿದೊಡ್ಡ ಚಿನ್ನದ ದರೋಡೆ ನಡೆದಿದೆ. ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ಐವರು ಕಿರಾತಕರು, ಕಣ್ಣು ಮುಚ್ಚಿ ಬಿಡುವುದರೊಳಗೆ ಕೆಜಿಗಟ್ಟಲೆ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದ್ದು, ದರೋಡೆಕೋರರ ವೇಗ ಮತ್ತು ಪ್ಲಾನಿಂಗ್ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಐದೇ ನಿಮಿಷದಲ್ಲಿ ‘ಫಿನಿಶ್’
ಅದು ಮಧ್ಯಾಹ್ನದ ಸಮಯ, ಅಂಗಡಿಯಲ್ಲಿ ಕೆಲ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದರು. ಗ್ರಾಹಕರು ಚಿನ್ನಾಭರಣಗಳನ್ನು ನೋಡುತ್ತಿದ್ದಾಗ ಐವರು ಅಪರಿಚಿತರು ಸ್ಕೈ ಜ್ಯೂವೆಲ್ಲರ್ಸ್ ಅಂಗಡಿಗೆ ನುಗ್ಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಒಳಗೆ ಬಂದವರು ಕೇವಲ 5 ನಿಮಿಷಗಳಲ್ಲಿ ಅಂದರೆ 2 ಗಂಟೆ 9 ನಿಮಿಷಕ್ಕೆಲ್ಲಾ ಕೋಟಿ ಕೋಟಿ ಮೌಲ್ಯದ 8 ಕೆಜಿಗೂ ಹೆಚ್ಚು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಭಾವಿ ತಂತ್ರಜ್ಞಾನ ಮತ್ತು ಪೂರ್ವ ಸಿದ್ಧತೆಯೊಂದಿಗೆ ಬಂದಿದ್ದ ಈ ಗ್ಯಾಂಗ್ ಅತ್ಯಂತ ಚಾಣಾಕ್ಷತನದಿಂದ ಕೆಲಸ ಮುಗಿಸಿದೆ.
ದರೋಡೆಯೇ ಒಂದು ಹೊಸ ಬ್ಯುಸಿನೆಸ್
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳನ್ನು ಗಮನಿಸಿದರೆ, ಇದೊಂಥರ ಹೊಸ ರೀತಿಯ ವ್ಯವಹಾರ ಎಂಬಂತಾಗಿದೆ. 'ಕಳ್ಳ ಸಿಗಲ್ಲ.. ಸಿಕ್ಕಿದ್ರೂ ಮಾಲು ಸಿಗಲ್ಲ' ಎಂಬುದು ದರೋಡೆಕೋರರ ಹೊಸ ಮಂತ್ರವಾದಂತಿದೆ. 2025ರ ಈ ವರ್ಷದಲ್ಲಿ ಬೀದರ್, ವಿಜಯಪುರ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ರಾಬರಿಗಳಾಗಿವೆ. ಆದರೆ ಆಘಾತಕಾರಿ ಅಂಶವೆಂದರೆ, ಈ ಪೈಕಿ ಶೇ. 50 ರಷ್ಟು ಪ್ರಕರಣಗಳಲ್ಲಿ ಕಳ್ಳರು ಇನ್ನೂ ಪತ್ತೆಯಾಗಿಲ್ಲ. ಒಂದು ವೇಳೆ ಸಿಕ್ಕಿಬಿದ್ದರೂ, ಕದ್ದ ಮಾಲು ಮಾತ್ರ ಪೂರ್ತಿಯಾಗಿ ರಿಕವರಿ ಆಗುತ್ತಿಲ್ಲ.
ದರೋಡೆಕೋರರು ಇದನ್ನು ಒಂದು ಹೂಡಿಕೆಯಂತೆ ನೋಡುತ್ತಿದ್ದಾರೆ. ಒಮ್ಮೆ ದೊಡ್ಡ ಮೊತ್ತದ ಲೂಟಿ ಮಾಡುವುದು, ಒಂದು ವೇಳೆ ಸಿಕ್ಕಿಬಿದ್ದರೂ ಜೈಲಿಗೆ ಹೋಗಿ ಬರುವುದು, ಅಲ್ಲಿಂದ ಬಂದ ಮೇಲೆ ಮೊದಲೇ ಬಚ್ಚಿಟ್ಟ ಹಣದಲ್ಲಿ ರಾಜ ಜೀವನ ನಡೆಸುವುದು ಇವರ ಪ್ಲಾನ್ ಆಗಿ ಕಂಡುಬರುತ್ತಿದೆ.
ದರೋಡೆಯಾದ ಆಭರಣಗಳ ಪಟ್ಟಿ:
ದರೋಡೆಕೋರರು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡಿದ್ದಾರೆ. ಲಭ್ಯವಾಗಿರುವ ಪಟ್ಟಿಯ ಪ್ರಕಾರ:
150 ನೆಕ್ಲೆಸ್ (4348 ಗ್ರಾಂ)
84 ಬಳೆಗಳು (1310 ಗ್ರಾಂ)
65 ಚೈನ್ (1207 ಗ್ರಾಂ)
19 ಕರಿಮಣಿ ಸರ ಹಾಗೂ 70 ಉಂಗುರಗಳು
13 ವಜ್ರದ ಉಂಗುರಗಳು ಸೇರಿದಂತೆ ಒಟ್ಟು 450ಕ್ಕೂ ಹೆಚ್ಚು ವಿವಿಧ ಆಭರಣಗಳನ್ನು ಲೂಟಿ ಮಾಡಲಾಗಿದೆ.
ಪೊಲೀಸರಿಗೆ ಸವಾಲಾದ ಕಿರಾತಕರು
ಹುಣಸೂರು ಟೌನ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ದರೋಡೆಗಳು ಪೊಲೀಸರ ನಿದ್ದೆಗೆಡಿಸಿವೆ. ದರೋಡೆಕೋರರು ಇಷ್ಟು ಧೈರ್ಯವಾಗಿ ಲೂಟಿ ಮಾಡುತ್ತಿರುವುದು ಕಾನೂನಿನ ಭಯ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಸಾಂಸ್ಕೃತಿಕ ನಗರಿಯ ಈ ಬಿಗ್ಗೆಸ್ಟ್ ರಾಬರಿ ಕೇಸ್ ಅನ್ನು ಭೇದಿಸಿ, ಮರ್ಯಾದೆ ಉಳಿಸಿಕೊಳ್ಳುವ ಜವಾಬ್ದಾರಿ ಈಗ ಮೈಸೂರು ಪೊಲೀಸರ ಮೇಲಿದೆ.