ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅಂತರ್ ಕಾಲೇಜು, ವಿವಿ ಬದಲಾವಣೆಗೆ ಅಸ್ತು
ಕಾಲೇಜಿನಿಂದ ಕಾಲೇಜಿಗೆ ಹಾಗೂ ವಿವಿಯಿಂದ ಮತ್ತೊಂದು ವಿವಿಗೆ ಸೇರಿಕೊಳ್ಳಲು ಪದವಿ ವಿದ್ಯಾರ್ಥಿಗಳು ಹರಸಾಹಸ ಪಡಬೇಕಿತ್ತು.. ಆದ್ರೆ ಇದೀಗ ಇಂಟರ್ ಯೂನಿವರ್ಸಿಟಿ, ಕಾಲೇಜು ವರ್ಗಾವಣೆಗೆ ಉನ್ನತ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಕೆಲ ವಿವಿಗಳು ಆದೇಶ ಪಾಲಿಸಿದ್ರೆ, ಮತ್ತೆ ಕೆಲ ವಿವಿಗಳು ವಿದ್ಯಾರ್ಥಿಗಳಿಗೆ ಕಾಲೇಜು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ.
ಪದವಿ ಓದುತ್ತಿರೋ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಗೆ ಕಾಲೇಜು ಬದಲಾಯಿಸಬೇಕಾದ ಸನ್ನಿವೇಶ ಬರುತ್ತೆ. ಒಮ್ಮೆ ಪದವಿ ಆರಂಭವಾದಮೇಲೆ ಅದೇ ಕೋರ್ಸ್ಗೆ ಮತ್ತೊಂದು ಕಾಲೇಜು(College) ಅಥವಾ ವಿವಿ ಸೇರೋದು ಕಷ್ಟವಾಗಿತ್ತು. ಆದ್ರೀಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಉನ್ನತ ಶಿಕ್ಷಣ ಇಲಾಖೆ ಪರಿಹಾರ ನೀಡಿದೆ. ಅಂತರ್ ಕಾಲೇಜು ವರ್ಗಾವಣೆಗೆ ಅಸ್ತು ಎಂದಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(Bengaluru University) ಅಂತರ್ ಕಾಲೇಜು ಹಾಗೂ ಯೂನಿವರ್ಸಿಟಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲ ಸೆಮಿಸ್ಟರ್ ಹಾಗೂ ಎರಡನೇ ಸೆಮಿಸ್ಟರ್ ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದು, ನಂತರ ಮೂರನೇ ಸೆಮಿಸ್ಟರ್ಗೆ ಮತ್ತೊಂದು ವಿವಿಗೆ ಸೇರಿಕೊಳ್ಳಲು ಈ ಹಿಂದೆ ಅವಕಾಶ ಇರಲಿಲ್ಲ. ಇದೀಗ ಕಾಯಿದೆ ತಿದ್ದುಪಡಿ ತಂದಿದ್ದು, ಇಂಟರ್ ಯೂನಿವರ್ಸಿಟಿ ಹಾಗೂ ಅಂತರ್ ಕಾಲೇಜು ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬೆಂಗಳೂರು ವಿವಿ ಪರೀಕ್ಷಾ ವಿಭಾಗದ ರಿಜಿಸ್ಟರ್ ಡಾ.ಶ್ರೀನಿವಾಸ್ ಹೇಳಿದ್ದಾರೆ. ಎಲ್ಲರೂ ಇಂಟರ್ ವಿವಿ ಬದಲಾವಣೆ ಮಾಡಿಕೊಳ್ಳೋದಕ್ಕೆ ಆಗಲ್ಲ. ಹಿಂದಿನ ವಿವಿ ಮತ್ತು ಈಗ ಸೇರುವ ವಿವಿ ಎರಡರಲ್ಲೂ ಪದವಿ ವಿಷಯ ಒಂದೇ ಆಗಿದ್ದರೆ, ಯಾವುದೇ ಚಿಂತೆಯಿಲ್ಲದೆ ವಿವಿ ಬದಲಾವಣೆ ಮಾಡಬಹುದು. ಬೆಂಗಳೂರು ವಿವಿಗೆ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು(graduate students) ಬೇರೆ ವಿಶ್ವವಿದ್ಯಾಲಯಗಳಿಂದ ವರ್ಗಾವಣೆ ಪಡೆದು ದಾಖಲಾತಿ ಪಡೆದುಕೊಂಡಿದ್ದಾರೆ. ಆದ್ರೆ ಬೆಂಗಳೂರು ಹೊರತು ಪಡಿಸಿ ಮಂಡ್ಯ ಹಾಗೂ ತುಮಕೂರು ವಿವಿಯಲ್ಲಿ ಅಂತರ್ ಕಾಲೇಜು ವರ್ಗಾವಣೆ ವಿಚಾರದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮಂಡ್ಯ ವಿವಿಯಿಂದ ತುಮಕೂರು ವಿವಿಗೆ ಅಂತರ್ ಕಾಲೇಜು ವರ್ಗಾವಣೆ ಕೊಡುತ್ತಿಲ್ಲ. ಹಿಂದಿನ ಸೆಮಿಸ್ಟರ್ ಫಲಿತಾಂಶ ಬಾರದೆ ನಾವು ವರ್ಗಾವಣೆ ಕೊಡೋದಿಲ್ಲ ಎಂದಿದ್ದಾರಂತೆ. ಆದ್ರೆ ಪರೀಕ್ಷೆ ಬರೆದು ಎಂಟು ತಿಂಗಳೂ ಕಳೆದ್ರು ಮಂಡ್ಯ ವಿವಿಯಲ್ಲಿ ಫಲಿತಾಂಶ ಬಂದಿಲ್ಲ.. ಹೀಗಾಗಿ ವಿದ್ಯಾರ್ಥಿಗಳಿಗೆ ಕಾಲೇಜು ವರ್ಗಾವಣೆ ಸಿಗದೆ ಸಾಕಷ್ಟು ಸಮಸ್ಯೆಯಾಗಿದೆ ಅಂತಾರೆ ಪೋಷಕರು.
ಇದನ್ನೂ ವೀಕ್ಷಿಸಿ: ಕರೆಂಟ್ ಕಣ್ಣಾಮುಚ್ಚಾಲೆಗೆ ಹೈರಾಣಾದ ರೈತರು: ಬೆಳೆ ಉಳಿಸಿಕೊಳ್ಳಲು ಹರಸಾಹಸ