
ಅಮೃತ ಭಾರತಿ, ಕನ್ನಡದ ಆರತಿ: 75 ಸ್ಥಳಗಳಲ್ಲಿ ಅಭಿಯಾನ, 31 ಜಿಲ್ಲೆಯಲ್ಲಿ ರಥಯಾತ್ರೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ. ಒಟ್ಟಾರೆ ರಾಜ್ಯದ 75 ಸ್ಥಳಗಳಲ್ಲಿ ಅಭಿಯಾನ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸೇರಿದಂತೆ ಅಭಿಯಾನದ ವೆಚ್ಚಕ್ಕಾಗಿ ಪ್ರತಿ ಜಿಲ್ಲೆಗೆ 1.80 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಜು.1ರಿಂದ 15ರವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನ’ ಎಂಬ ಪ್ರೇರಣಾದಾಯಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಸ್ವಾತಂತ್ರ್ಯ ಹೋರಾಟ ನಡೆದ ನಾಡಿನ ಪ್ರಮುಖ 15 ಸ್ಥಳಗಳಲ್ಲಿ ದೇಶಭಕ್ತಿ ಬಿಂಬಿಸುವ ಬೀದಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಆ.1ರಿಂದ 8 ರವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ರಥಯಾತ್ರೆ ನಡೆಸಲಾಗುವುದು. 31 ಜಿಲ್ಲೆಗಳಲ್ಲೂ ಸಂಚರಿಸುವ ರಥಯಾತ್ರೆಗಳು ಆ.9ರಂದು ಬೆಂಗಳೂರನ್ನು ತಲುಪಲಿವೆ. ಆ.9 ರಿಂದ 11 ರವರೆಗೆ ನಗರದಲ್ಲಿ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.