ಹೆಣ್ಣಿನ ಕಾರಣಕ್ಕೆ ಕೊ* ಯತ್ನ.. ಏನದು ‘ಮುನಿ’ ರಹಸ್ಯ? ಡಿಕೆ ಬ್ರದರ್ಸ್ ವಿರುದ್ಧ ಸಿಡಿದದ್ದೇಕೆ ಮುನಿರತ್ನ!
ಆರ್.ಆರ್. ನಗರದಲ್ಲಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದ್ದು, ಮೊಟ್ಟೆಯಲ್ಲಿ ಆ್ಯಸಿಡ್ ಇತ್ತು ಎಂದು ಮುನಿರತ್ನ ಆರೋಪಿಸಿದ್ದಾರೆ. ದಾಳಿಯ ಹಿಂದೆ ಕುಸುಮಾ ಹನುಮಂತರಾಯಪ್ಪ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಬೆಂಗಳೂರಿನ ಆರ್.ಆರ್. ನಗರದಲ್ಲಿ ವಾಜಪೇಯಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಶಾಸಕ ಮುನಿರತ್ನ ಮೇಲೆ ತಲೆಗೆ ಸುಷ್ಕರ್ಮಿಗಳು ಮೊಟ್ಟೆಯನ್ನು ಎಸೆದಿದ್ದಾರೆ. ಆದರೆ, ಅದು ಬರೀ ಮೊಟ್ಟೆಯಲ್ಲ, ಅದ್ರೊಳಗೆ ಆ್ಯಸಿಡ್ ತುಂಬಲಾಗಿತ್ತು ಅಂತ ಮುನಿರತ್ನ ಆರೋಪಿಸಿದ್ದಾರೆ. ಈ ಆರೋಪ ಅದೆಷ್ಟು ಸತ್ಯ ಎಂಬುದು ಇದೀಗ ರಾಜ್ಯದಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ. ಮುನಿರತ್ನ ಆರೋಗ್ಯ ವಿಚಾರಿಸಿದ ಸಂಸದ ಡಾ.ಮಂಜುನಾಥ್, ಮುನಿರತ್ನ ಅವ್ರ ತಲೆಕೂದಲು ಸುಟ್ಟ ಹೋಗಿದೆ ಎಂದಿದ್ದಾರೆ. ಇದರ ಬೆನ್ನಲ್ಲಿಯೇ ಮೊಟ್ಟೆ ದಾಳಿಯ ಹಿಂದೆ ಕುಸುಮಾ ಹನುಮಂತರಾಯಪ್ಪ ಕೈವಾಡವಿದೆ ಅಂತ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಇನ್ನು ಮುನಿರತ್ನ ಮೇಲಿನ ಮೊಟ್ಟೆ ದಾಳಿಗೆ ಕುಸುಮಾ ಹನುಮಂತರಾಯಪ್ಪ ಕೂಡ ತಿರುಗೇಟು ಕೊಟ್ಟಿದ್ದಾರೆ.
ಈ ಮೂಲಕ ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ನೆತ್ತಿಯ ಮೇಲೆ ಬಿದ್ದಿರೋ ಮೊಟ್ಟೆ ಪ್ರಕರಣದಿಂದ ರಾಜರಾಜೇಶ್ವರಿ ನಗರದ ರಣರಂಗದಲ್ಲಿ ಹೊಸ ಕುರುಕ್ಷೇತ್ರಕ್ಕೆ ದಾರಿ ಮಾಡಿ ಕೊಟ್ಟಿದೆ. ಆರ್.ಆರ್ ನಗರ ಅಖಾಡದಲ್ಲಿ ಧಗಧಗಸಿಸ್ತಾ ಇರೋ ರಾಜಕೀಯ ಜಿದ್ದಾಜಿದ್ದಿ ಮತ್ತೊಂದು ಹಂತ ತಲುಪಿ ಬಿಟ್ಟಿದೆ. ಆದರೆ, ಇಲ್ಲಿ ಪೊಲೀಸರು ಇಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸತ್ಯಾಸತ್ಯತೆಯನ್ನಯ ತಿಳಿದುಕೊಳ್ಳಲಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜನಪ್ರತಿನಿಧಿಗಳಿಗೇ ಹೀಗಾದರೆ, ಜನಸಾಮಾನ್ಯರ ಪಾಡೇನು ಎಂದು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.