ಕೆರೆಗೆ ಕಾರು ಹಾರಿಸಿ ಭೂಪ; ಪ್ರೇಯಸಿ ಶ್ವೇತಾಳಿಗೆ ಚಟ್ಟ ಕಟ್ಟಿದ ಪ್ರಿಯಕರ ರವಿ!

ಹಾಸನದಲ್ಲಿ ಕಾರು ಅಪಘಾತ ಎಂದು ಭಾವಿಸಲಾಗಿದ್ದ ಘಟನೆ ಪ್ರೇಮ ನಿರಾಕರಣೆಯಿಂದ ನಡೆದ ಕೊಲೆ ಎಂದು ಬೇಲೂರು ಪೊಲೀಸರು ಬಯಲು ಮಾಡಿದ್ದಾರೆ. ಪ್ರಿಯಕರ ರವಿ, ಶ್ವೇತಾಳನ್ನು ಕಾರಿನಲ್ಲಿ ಕೆರೆಗೆ ನುಗ್ಗಿಸಿ ಕೊಲೆ ಮಾಡಿ, ಅಪಘಾತ ಎಂದು ನಾಟಕವಾಡಿದ್ದ.

Share this Video
  • FB
  • Linkdin
  • Whatsapp

ಹಾಸನ (ಆ.21): ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಹಾಸನ ಜಿಲ್ಲೆಯ ಬೇಲೂರು ಪೊಲೀಸರು ಮಹತ್ವದ ಟ್ವಿಸ್ಟ್ ನೀಡಿದ್ದಾರೆ. ಇದು ಅಪಘಾತವಲ್ಲ, ಬದಲಾಗಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಪ್ರಿಯಕರನೇ ನಡೆಸಿದ ಕೊಲೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಸಿನಿಮೀಯಾ ಶೈಲಿಯಲ್ಲಿ ನಡೆದ ಕೊಲೆ:
ಕಳೆದ ಮಂಗಳವಾರ ಮಧ್ಯರಾತ್ರಿ, ಬೇಲೂರು ತಾಲ್ಲೂಕಿನ ಚಂದನಹಳ್ಳಿ ಬಳಿಯ ಕೆರೆಗೆ ಕಾರೊಂದು ಉರುಳಿ ಬಿದ್ದು ಅಪಘಾತವಾಗಿತ್ತು. ಈ ಅಪಘಾತದಲ್ಲಿ 32 ವರ್ಷದ ಶ್ವೇತಾ ಮೃತಪಟ್ಟಿದ್ದರೆ, ಕಾರು ಚಲಾಯಿಸುತ್ತಿದ್ದ ರವಿ ಈಜಿ ದಡ ಸೇರಿ ಬದುಕುಳಿದಿದ್ದ. ಇದು ಕೇವಲ ಅಪಘಾತ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅರೇಹಳ್ಳಿ ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆ ರವಿಯನ್ನು ವಿಚಾರಣೆಗೊಳಪಡಿಸಿದಾಗ, ಕೊಲೆ ರಹಸ್ಯ ಬಯಲಾಗಿದೆ. ರವಿ, ತಾನು ಇಷ್ಟಪಡುತ್ತಿದ್ದ ಶ್ವೇತಾಳನ್ನು ಸಿನಿಮೀಯಾ ಶೈಲಿಯಲ್ಲಿ ಕೆರೆಗೆ ಕಾರು ನುಗ್ಗಿಸಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಈಜಿ ದಡ ಸೇರಿ ಅಪಘಾತದ ಕಥೆ ಕಟ್ಟಿದ್ದನು.

ಸಂಸಾರ ತೊರೆದಿದ್ದ ಶ್ವೇತಾ:
ಶ್ವೇತಾ ಅವರಿಗೆ 12 ವರ್ಷಗಳ ಹಿಂದೆ ಸಕಲೇಶಪುರದ ಯಡವರಹಳ್ಳಿ ಬಸವರಾಜ್ ಎಂಬುವವರೊಂದಿಗೆ ಮದುವೆಯಾಗಿತ್ತು. ಆದರೆ, ಪತಿಯ ಕುಡಿತದ ಚಟದಿಂದ ಬೇಸತ್ತು 4 ವರ್ಷಗಳ ಸಂಸಾರದ ನಂತರ ತನ್ನ ತಾಯಿಯ ಮನೆ ಸೇರಿದ್ದರು. ಇದೇ ಸಂದರ್ಭದಲ್ಲಿ ಶ್ವೇತಾ ಅವರ ಹಳೆಯ ಸ್ನೇಹಿತ ಹಡೇನಹಳ್ಳಿಯ ರವಿ, ಆಕೆಯ ಹಿಂದೆ ಬಿದ್ದು ತಾನು ತನ್ನ ಹೆಂಡತಿಯನ್ನು ಬಿಟ್ಟು ಬರುತ್ತೇನೆ, ನನ್ನೊಂದಿಗೆ ಬಾ ಎಂದು ಒತ್ತಾಯಿಸಿದ್ದ. ಆದರೆ, ಶ್ವೇತಾ ರವಿ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ರವಿ, ಶ್ವೇತಾಳನ್ನು ಹಾಸನದಿಂದ ಕಾರಿನಲ್ಲಿ ಕರೆತಂದು ಈ ದುಷ್ಕೃತ್ಯ ಎಸಗಿದ್ದಾನೆ.

ಆರೋಪಿ ಬಂಧನ:
ಪೊಲೀಸರ ತನಿಖೆಯಲ್ಲಿ ರವಿ ಕೃತ್ಯ ಬಯಲಾದ ನಂತರ, ಶ್ವೇತಾಳ ಕುಟುಂಬಸ್ಥರ ದೂರಿನ ಮೇರೆಗೆ ರವಿಯನ್ನು ವಶಕ್ಕೆ ಪಡೆಯಲಾಗಿದೆ. ಅರೇಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ, ಅಪಘಾತದ ಹಿಂದೆ ಅಡಗಿದ್ದ ಕೊಲೆ ರಹಸ್ಯ ಬಯಲಾಗಿದೆ. ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಈಗ ಜೈಲು ಸೇರಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Related Video