ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ, 'ತಂದೆಯೇ ಪೂರ್ಣಾವಧಿ ಸಿಎಂ' ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಆಂತರಿಕ ಸಿಎಂ ಹುದ್ದೆಯ ಸಮರಕ್ಕೆ ಮತ್ತೆ ಕಿಡಿ ಹೊತ್ತಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಡಿಕೆಶಿ ಬಣ 'ಜನವರಿ ತನಕ ಕಾದು ನೋಡಿ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.09): ಕರ್ನಾಟಕ ಕಾಂಗ್ರೆಸ್‌ನ ಆಂತರಿಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಹುದ್ದೆಯ ಸಿಂಹಾಸನ ಸಮರ ಬೂದಿ ಮುಚ್ಚಿದ ಕೆಂಡದಂತೆ ಮತ್ತೆ ಭುಗಿಲೆದ್ದಿದೆ. ಕದನ ವಿರಾಮ ಘೋಷಿಸಿ ಸೈಲೆಂಟ್ ಮೂಡ್‌ಗೆ ಜಾರಿದ್ದ ಉಭಯ ನಾಯಕರು ಮತ್ತು ಅವರ ಆಪ್ತ ವಲಯದ ಹೇಳಿಕೆಗಳು ಇದೀಗ ಅಧಿವೇಶನದ ಹೊತ್ತಲ್ಲೇ ಹೊಸ ಬಿರುಗಾಳಿಯನ್ನು ಸೃಷ್ಟಿಸಿವೆ. 'ಸರಣಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌'ಗಳ ನಂತರ ಕೊಂಚ ತಣ್ಣಗಾಗಿದ್ದ 'ಹಂಚಿಕೆ ಸೂತ್ರ'ದ ಗೊಂದಲ, ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹೇಳಿಕೆಯಿಂದಾಗಿ ಮತ್ತೆ ವೈಲೆಂಟ್ ಸೌಂಡ್ ಮಾಡಲಾರಂಭಿಸಿದೆ.

ಸಿದ್ದು ಪುತ್ರನ ಶಾಸನ: 'ಪೂರ್ಣಾವಧಿ ಸಿಎಂ ತಂದೆಯೇ' 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, 'ನಮ್ಮ ತಂದೆಯೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ' ಎಂಬ ನೇರ ಹೇಳಿಕೆ ನೀಡುವ ಮೂಲಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವ ಕುರಿತಿದ್ದ ಆಂತರಿಕ ಒಪ್ಪಂದದ ಸುತ್ತ ಅನುಮಾನದ ಜ್ವಾಲೆಯನ್ನು ಹೆಚ್ಚಿಸಿದ್ದಾರೆ. 'ತಂದೆಯೇ ಪೂರ್ಣಾವಧಿ ಸಿಎಂ' ಎಂಬ ಪುತ್ರನ ಈ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್ ಬಣವು 'ಸಿಂಹಾಸನಕ್ಕೆ ಮಗ ಕಟ್ಟಿದ ಅಭೇದ್ಯ ಕೋಟೆ' ಎಂದು ವಿಶ್ಲೇಷಿಸುತ್ತಿದೆ. ಈ ಹೇಳಿಕೆ, ಕಾಂಗ್ರೆಸ್ ಹೈಕಮಾಂಡ್ ವಿಧಿಸಿದ ಅಸ್ಪಷ್ಟ 'ಕದನ ವಿರಾಮ'ವನ್ನು ಕಂಪಿಸುವಂತೆ ಮಾಡಿದೆ.

ಡಿಕೆ ಬಣದ ಜನವರಿ ಪ್ರತಿತಂತ್ರ ಮತ್ತು ಮಾರ್ಮಿಕ ನುಡಿ 

ಯತೀಂದ್ರ ಅವರ ಈ 'ಪೂರ್ಣಾವಧಿ ತಂತ್ರ'ಕ್ಕೆ ಪ್ರತಿಕ್ರಿಯೆಯಾಗಿ, ಡಿಕೆಶಿ ಅತ್ಯಾಪ್ತರು ಮತ್ತು ಬಂಡೆ ಬ್ರದರ್ (ಡಿ.ಕೆ. ಸುರೇಶ್) ವಲಯವು 'ಹೊಸ ಮುಹೂರ್ತ'ದ ಬಗ್ಗೆ ಸುಳಿವು ನೀಡಿದೆ. 'ಜನವರಿ ತನಕ ಕಾದು ನೋಡಿ' ಎಂಬ ಮಾರ್ಮಿಕ ಹೇಳಿಕೆ ನೀಡುವ ಮೂಲಕ, ಮುಂದಿನ ವರ್ಷದ ಆರಂಭದಲ್ಲಿ ಸಿಎಂ ಬದಲಾವಣೆಗೆ ಸಂಬಂಧಿಸಿದ ಒತ್ತಡ ತಂತ್ರವನ್ನು ಮತ್ತೆ ಶುರು ಮಾಡುವ ಸೂಚನೆಯನ್ನು ಡಿ.ಕೆ. ಶಿವಕುಮಾರ್ ಬಣ ರವಾನಿಸಿದೆ.

ಇದೇ ವೇಳೆ, ಡಿ.ಕೆ. ಸುರೇಶ್ ಅವರು 'ಸೋಲು-ಗೆಲುವು.. ಪ್ರಯತ್ನ-ಆಶೀರ್ವಾದ'ದ ಬಗ್ಗೆ ಮಾರ್ಮಿಕ ನುಡಿಗಳ ಮೂಲಕ ಮಾತನಾಡಿದ್ದು, ಇದು ಆಂತರಿಕ ರಾಜಕೀಯದ ಹೊಸ 'ದಾಳ' ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಮತ್ತೊಂದೆಡೆ, ಸಚಿವ ಕೆ.ಎನ್. ರಾಜಣ್ಣ ಅವರಂತಹ ಕೆಲವರು, 'ಡಿಕೆಶಿ ಸಿಎಂ ಆಗುವ ಹಾದಿ ಅಷ್ಟು ಸುಲಭವಲ್ಲ' ಎಂದು ಸೂಚ್ಯವಾಗಿ ಎಚ್ಚರಿಸುವ ಮೂಲಕ ಸಂಘರ್ಷಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಅಧಿವೇಶನದ ಹೊತ್ತಲ್ಲೇ ವಿಪಕ್ಷಕ್ಕೆ ಬ್ರಹ್ಮಾಸ್ತ್ರ 

ಯಾವುದು ಆಗಬಾರದು ಎಂದು ಹೈಕಮಾಂಡ್ ಬಯಸಿತ್ತೋ, ಅದೇ ಅಧಿವೇಶನದ ಹೊತ್ತಲ್ಲಿ ಸಂಭವಿಸಿದೆ. ರೈತರ ಸಮಸ್ಯೆಗಳು, ಬರ ಪರಿಸ್ಥಿತಿಯ ಕುರಿತು ಪ್ರತಿಪಕ್ಷಗಳು (ಬಿಜೆಪಿ) ಬ್ರಹ್ಮಾಸ್ತ್ರ ಹಿಡಿದು ಕಾಯುತ್ತಿರುವಾಗಲೇ, ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಮತ್ತೆ ಬೀದಿಗೆ ಬಂದಿರುವುದು, ವಿಪಕ್ಷಗಳ ಕೈಗೆ ಸುಲಭವಾಗಿ ಅಸ್ತ್ರ ಸಿಕ್ಕಂತಾಗಿದೆ. ಸದ್ಯಕ್ಕೆ, ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ 'ಅರಸೊತ್ತಿಗೆ' ದಾಖಲೆ ಮುರಿದು ಪೂರ್ಣಾವಧಿ ಮುಂದುವರಿಯುತ್ತಾರೆಯೇ ಅಥವಾ 'ಜನವರಿ ಪ್ರತಿತಂತ್ರ' ಸಫಲವಾಗುತ್ತದೆಯೇ ಎಂಬ ಗೊಂದಲ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರೆದಿದೆ.

Related Video