MLC Election Fight: ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ

*  ಗೆಲುವು ನಮ್ಮದೇ ಎಂದು ಘೋಷಿಸಿಕೊಂಡ ಉಭಯ ಪಕ್ಷಗಳು 
*  ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಚಾರವಾದ ಪರಿಷತ್‌ ಚುನಾವಣೆ
*  ಬಿಜೆಪಿಗೆ ಮಾತ್ರ ಈ ಬಾರಿ ಗೆಲ್ಲಲೇಬೇಕೆಂಬ ಹಠ 

First Published Dec 3, 2021, 11:57 AM IST | Last Updated Dec 3, 2021, 11:57 AM IST

ಉತ್ತರ ಕನ್ನಡ(ಡಿ.03):  ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಅಖಾಡ ಸನ್ನದ್ಧಗೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಫೈಟ್ ಬಿಸಿ ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಗೊಂಡಿದೆ. ಈ ಬಾರಿ ಚುನಾವಣೆಯು ಶಿಷ್ಯ ಹೆಬ್ಬಾರ್ ಹಾಗೂ ಗುರು ದೇಶಪಾಂಡೆ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದ್ದು, ಶತಾಯಗತಾಯ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವ ಪಣತೊಟ್ಟಿದ್ದಾರೆ. 

ಹೌದು, ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು(ಗುರುವಾರ) ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯೊಂದಿಗೆ‌ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಗಣಪತಿ ಉಳ್ವೇಕರ್‌ಗೆ ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ್ ಹಾಗೂ ಇತರ ಬಿಜೆಪಿ ಮುಖಂಡರು ಸಾಥ್ ನೀಡಿದರೆ, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್‌ಗೆ ಮಾಜಿ ಸಚಿವ ಆರ್.ವಿ. ದೇಶ್‌ಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಮಂಕಾಳು ವೈದ್ಯ, ಸತೀಶ್ ಸೈಲ್, ಶಾರದಾ ಶೆಟ್ಟಿ, ಮಾಜಿ ಎಂಎಲ್‌ಸಿ ಎಸ್.ಎಲ್. ಘೋಟ್ನೇಕರ್ ಸಾಥ್ ನೀಡಿದ್ದಾರೆ. 

Vaccine Politics: ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ: ಸಂಸತ್‌ನಲ್ಲಿ ತೇಜಸ್ವಿ ಗುಡುಗು!

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಉಭಯ ಪಕ್ಷಗಳು ಗೆಲುವು ನಮ್ಮದೇ ಎಂದು ಘೋಷಿಸಿಕೊಂಡಿದೆ. ಬಿಜೆಪಿಯಂತೂ ಈ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಚುನಾವಣೆಯಾಗಿದ್ದು, ವ್ಯಕ್ತಿಗತವಾದದ್ದಲ್ಲ. ಈ ಉಳ್ವೇಕರ್ ಗೆಲ್ಲೋದಂತೂ ಸತ್ಯ ಎಂದು ವಿರೋಧ ಪಕ್ಷವನ್ನು ಟೀಕಿಸದೆ ಸೈಲೆಂಟಾಗಿ ತಮ್ಮ ಗೆಲುವಿನ ಬಾವುಟದತ್ತ ಗುರಿಯಿರಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದ ಬಿಜೆಪಿಗರಿಗೆ ಮತ ಕೇಳುವ ಅಧಿಕಾರವಿಲ್ಲ. ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟಿದ್ದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಾಗ್ದಾಳಿ ನಡೆಸಿದರೆ, ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಬಿಜೆಪಿಯವರು ಮುಳುಗಿದ್ದರಿಂದ ಇತರರು ಮುಳುಗಿರುವುದಾಗಿ ಅಂದುಕೊಂಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿದ ಮೋದಿ ಅಸೆಂಬ್ಲಿ ಸೀಟುಗಳನ್ನೇ ಕಳೆದುಕೊಂಡಿದ್ದಾರೆ. ಬಿಜೆಪಿಯ ಹಡಗು ಮುಳುಗುತ್ತಿದೆ. ಯಡಿಯೂರಪ್ಪರನ್ನು ಯಾಕೆ ಸ್ಥಾನದಿಂದ ಉಚ್ಛಾಟನೆ ಮಾಡಿದ್ರು ಎಂದು ಅವರೇ ಉತ್ತರಿಸಬೇಕು ಎಂದು ಟೀಕಿಸಿದ್ದಾರೆ. 

Mandya: 30 ವರ್ಷಗಳ ಪ್ರೀತಿ, 65 ರ ಇಳಿವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

ಇನ್ನು ಮಾಜಿ‌ ಶಾಸಕ ಮಧು ಬಂಗಾರಪ್ಪ‌ ಕೂಡಾ ಮಾತನಾಡಿ, ದೇಶದ ಪ್ರಧಾನಿಯನ್ನು ಮೊದಲು ಜನರು ದೇವರಂತೆ ನೋಡುತ್ತಿದ್ದರು.‌ ಆದರೆ, ದೇವರು ಈಗ ಕ್ಷಮೆ ಕೇಳುವಂತ ವ್ಯವಸ್ಥೆಯನ್ನು ಅವರೇ ಸೃಷ್ಟಿಸಿಕೊಂಡಿದ್ದಾರೆ. ಬಿಜೆಪಿಯವರು ಬಹಳ ನಿಷ್ಠಾವಂತ ಕಾರ್ಯಕರ್ತರು. ಹೀಗಾಗಿ ಬಿಜೆಪಿಯವರು ಬಹಳ ನಿಷ್ಠೆಯಿಂದಲೇ ಕಮಿಷನ್ ಹೊಡೆಯುತ್ತಾರೆ ಆರೋಪಿಸಿದ್ದಾರೆ.‌ 

ಒಟ್ಟಿನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಾನವನ್ನು ಈವರೆಗೆ ತನ್ನ ಪಾಲಿಗೆ ಎಳೆದುಕೊಳ್ಳುತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಮತ್ತೆ ತನ್ನ ಸ್ಥಾನ ಉಳಿಸುಕೊಳ್ಳುವುದು ಪ್ರತಿಷ್ಠೆಯ ವಿಚಾರವಾಗಿದೆ. ಆದರೆ, ಬಿಜೆಪಿ ಮಾತ್ರ ಈ ಬಾರಿ ಗೆಲ್ಲಲೇಬೇಕೆಂಬ ಹಠದೊಂದಿಗೆ ಶತಾಯಗತಾಯ ಪ್ರಯತ್ನ ಮುಂದುವರಿಸಿದೆ. ಈ ಕಾರಣದಿಂದ ಗುರು ಶಿಷ್ಯರಾದ ಆರ್.ವಿ.ದೇಶ್‌ಪಾಂಡೆ ಹಾಗೂ ಶಿವರಾಮ ಹೆಬ್ಬಾರ್ ನೇರವಾಗಿ ಕಣಕ್ಕಿಳಿದಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಅನ್ನೋದನ್ನ ಕಾದು ನೋಡಬೇಕಷ್ಟೇ.