INBL ಟೂರ್ನಿಯಲ್ಲಿ 500ಕ್ಕೂ ಹೆಚ್ಚು ಆಟಗಾರರು, 120 ತಂಡಗಳು ಭಾಗಿ!
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ರೀತಿ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಲೀಗ್ ಆಯೋಜಿಸುವುದಾಗಿ ಬಿಎಫ್‌ಐ ಕಳೆದ ನವೆಂಬರ್‌ನಲ್ಲಿ ಘೋಷಿಸಿತ್ತು
ಬೆಂಗಳೂರು (ಮಾ. 18): ಚೊಚ್ಚಲ ಆವೃತ್ತಿಯ 3*3 ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್)ಗೆ ಶುಕ್ರವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ ಒಟ್ಟು 120 ತಂಡಗಳು ಹಾಗೂ ಸುಮಾರು 500 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಲೀಗ್ ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ದೆಹಲಿ, ಮುಂಬೈ, ಕೊಚ್ಚಿ, ಹೈದರಾಬಾದ್, ಜೈಪುರ, ಕೋಲ್ಕತಾ ಸೇರಿದಂತೆ 20 ನಗರಗಳಲ್ಲಿ ಮೇ 29ರ ವರೆಗೂ ವಿವಿಧ ವಾರಾಂತ್ಯಗಳಲ್ಲಿ ನಿಗದಿಯಾಗಿವೆ.
ಈ ಪೈಕಿ ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಮಾ.18ರಿಂದ 20ರ ವರೆಗೆ ನಡೆಯಲಿದೆ. ಕೋಲ್ಕತಾದಲ್ಲಿ 90ಕ್ಕೂ ಹೆಚ್ಚು ತಂಡಗಳು ಸ್ಪರ್ಧಿಸಲಿದ್ದು, 350ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ತಿಳಿಸಿದರು.
ಇದನ್ನೂ ಓದಿ: All England Badminton ವಿಶ್ವ ನಂ.3 ಆಟಗಾರನಿಗೆ ಅಘಾತ ನೀಡಿದ ಲಕ್ಷ್ಯ ಸೆನ್, ಸೈನಾ, ಸಿಂಧು ಔಟ್!
ಚೊಚ್ಚಲ ಆವೃತ್ತಿಯ ಟೂರ್ನಿ 4 ವಿಭಾಗಗಳಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಲೀಗ್‌ನಲ್ಲಿ ಪುರುಷರ ವಿಭಾಗದಲ್ಲಿ 54 ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, 216 ಆಟಗಾರರು ವಿವಿಧ ತಂಡಗಳ ಪರ ಆಡಲಿದ್ದಾರೆ. ಮಹಿಳಾ ವಿಭಾಗದಲ್ಲಿ 16 ತಂಡಗಳು ಸ್ಪರ್ಧಿಸಲಿದ್ದು, 64 ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. ಇನ್ನು, ಅಂಡರ್-18 ವಿಭಾಗದಲ್ಲೂ ಟೂರ್ನಿ ನಡೆಯಲಿದ್ದು, ಪುರುಷರ ವಿಭಾಗದಲ್ಲಿ 30 ತಂಡಗಳು ನಡುವೆ ಸ್ಪರ್ಧೆ ಏರ್ಪಡಲಿದೆ.
20 ಮಹಿಳಾ ತಂಡಗಳಲ್ಲಿ 80 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಯಾವುದೇ ಆಟಗಾರರಿಗೆ ತಂಡ ರಚಿಸಲು ಮತ್ತು ಲೀಗ್‌ನಲ್ಲಿ ಆಡಲು ಮುಕ್ತ ಅವಕಾಶವಿದೆ ಎಂದು ಬಿಐಎಫ್ ತಿಳಿಸಿದೆ. ಪ್ರತಿ ನಗರದಲ್ಲಿ ಚಾಂಪಿಯನ್ ಆಗುವ ತಂಡಗಳು ಮೇ 27ರಿಂದ 29ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಳ್ಳಲಿವೆ.
ನಗರ ಮಟ್ಟದ ಹಾಗೂ ಬಳಿಕ ರಾಷ್ಟ್ರೀಯ ಫೈನಲ್‌ನಲ್ಲಿ ಪ್ರತಿ ವಿಭಾಗದಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನ ಸಿಗಲಿದೆ. ನಗರ ಮಟ್ಟದ ಚಾಂಪಿಯನ್‌ಗಳಿಗೆ 30 ಸಾವಿರ ರು., ರನ್ನರ್-ಅಪ್ ತಂಡಕ್ಕೆ 20 ಸಾವಿರ ರು. ನಗದು ದೊರೆಯಲಿದೆ. ರಾಷ್ಟ್ರೀಯ ಫೈನಲ್ಸ್‌ನ ಚಾಂಪಿಯನ್ ತಂಡಕ್ಕೆ 1.50 ಲಕ್ಷ ರು., ರನ್ನರ್-ಅಪ್ ತಂಡಕ್ಕೆ 1 ಲಕ್ಷ ರು. ನಗದು ಮೊತ್ತ ಸಿಗಲಿದೆ ಎಂದು ಬಿಐಎಫ್ ತಿಳಿಸಿದೆ.
ಲೀಗ್ ಆಯೋಜನೆಯಿಂದ ದೇಶದಲ್ಲಿ ಬಾಸ್ಕೆಟ್‌ಬಾಲ್ ಇನ್ನಷ್ಟುಪ್ರಗತಿ ಸಾಧಿಸಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ 3*3 ವಿಭಾಗದಲ್ಲಿ ಅರ್ಹತೆ ಪಡೆದುಕೊಳ್ಳುವುದು ನಮ್ಮ ಮುಖ್ಯ ಗುರಿ. ಅದಕ್ಕೆ ಅವಕಾಶ ಸಿಗುವ ಭರವಸೆ ಇದೆ. ರಾಷ್ಟ್ರೀಯ ಚಾಂಪಿಯನ್‌ಶಿಪ್ ಬಳಿಕ 5*5 ವಿಭಾಗದಲ್ಲೂ ಲೀಗ್ ಆರಂಭಿಸುತ್ತೇವೆ. ವಿವಿಧ ನಗರಗಳಲ್ಲಿ ಶಾಲಾ ಮಟ್ಟದಿಂದಲೇ ಬಾಸ್ಕೆಟ್‌ಬಾಲ್ ಆಟಕ್ಕೆ ಒತ್ತು ಕೊಡಲಿದ್ದೇವೆ ಎಂದು ಬಿಎಫ್‌ಐ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಹೇಳಿದ್ದಾರೆ.