ಕಾರವಾರ: ಸುರಕ್ಷತೆ, ಬಿಗಿ ಭದ್ರತೆ, ತುರ್ತು ಸಂದರ್ಭ ಸನ್ನದ್ಧತೆಗೆ ಸಾಗರಕವಚ ಅಣಕು ಕಾರ್ಯಾಚರಣೆ

ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ಮಹತ್ತರ ಯೋಜನೆಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆ ಅತ್ಯಂತ ಸೂಕ್ಷ್ಮ  ಪ್ರದೇಶವೂ ಆಗಿರೋದ್ರಿಂದ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಅನ್ನೋದನ್ನ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಎರಡು ದಿನಗಳ ಸಾಗರ ಕವಚ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ. 

First Published May 4, 2022, 11:11 AM IST | Last Updated May 4, 2022, 6:42 PM IST

ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ಮಹತ್ತರ ಯೋಜನೆಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆ ಅತ್ಯಂತ ಸೂಕ್ಷ್ಮ  ಪ್ರದೇಶವೂ ಆಗಿರೋದ್ರಿಂದ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಅನ್ನೋದನ್ನ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಎರಡು ದಿನಗಳ ಸಾಗರ ಕವಚ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ. 

ಜಿಲ್ಲೆಯ ಕರಾವಳಿ ಭಾಗದ ಭದ್ರತೆ ದೃಷ್ಠಿಯಲ್ಲಿ ಪೊಲೀಸ್ ಇಲಾಖೆ, ಕೋಸ್ಟಲ್ ಪೊಲೀಸ್, ಕೋಸ್ಟ್ ಗಾರ್ಡ್ಸ್, ನೌಕಾದಳ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಈ ಸಾಗರಕವಚ ಅಣುಕು ಕಾರ್ಯಾಚರಣೆ ನಡೆಸಲಾಗಿದ್ದು, ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಸಮುದ್ರ ಮಾರ್ಗದಲ್ಲಿ ತಿರುಗಾಡಿ ಜಿಲ್ಲೆ ನುಸುಳಲೆತ್ನಿಸುವ ಉಗ್ರರನ್ನು ಯಾವ ರೀತಿಯಲ್ಲಿ ಹತ್ತಿಕ್ಕಬಹುದು ಅನ್ನೋದರ ಬಗ್ಗೆ ಅಭ್ಯಾಸ ನಡೆಸುವುದು ಇದರ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಜಿಲ್ಲೆಯ ಒಳಗೆ ಹಾಗೂ ಹೊರಗೆ ಹೋಗುವ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಯಿತು. 

ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

ಉಗ್ರರು ರಕ್ಷಣಾ ಸಿಬ್ಬಂದಿಯ ಕಣ್ತಪ್ಪಿಸಿ ಜಿಲ್ಲೆಯ ಒಳಪ್ರವೇಶಿಸದಂತೆ ತಡೆಯುವುದು ಭದ್ರತಾ ಸಿಬ್ಬಂದಿ ಕಾರ್ಯವಾಗಿರೋದ್ರಿಂದ ಅಣುಕು ಕಾರ್ಯಾಚರಣೆಯಲ್ಲಿ ನಕಲಿ ಉಗ್ರರರನ್ನು ಹಿಡಿದು ಬಂಧಿಸುವ ಪ್ರಕ್ರಿಯೆಯೂ ನಡೆಯಿತು. ಈ  ಕಾರ್ಯಾಚರಣೆಯಲ್ಲಿ ಪರಿಶೀಲನೆ ವೇಳೆ ಅರಬ್ಬೀ ಸಮುದ್ರ ವ್ಯಾಪ್ತಿಯ ಕೂರ್ಮಗಡ ದ್ವೀಪದ ಬಳಿ ಒಟ್ಟು 18 ಮಂದಿ ನುಸುಳುಕೋರರನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದು, ಅವರಿಂದ ನಕಲಿ ಬಾಂಬ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಸಮುದ್ರದ ಮಾರ್ಗದ ಭಿಗಿ ಬಂದೋಬಸ್ತ್ ಬಗ್ಗೆ ಕೋಸ್ಟಲ್ ಪೊಲೀಸ್, ಕೋಸ್ಟ್‌ಗಾರ್ಡ್ಸ್ ಹಾಗೂ ನೌಕಾದಳ ತೋರಿಸಿಕೊಟ್ಟಿದ್ದಾರೆ. 

ಅಣಕು ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ನೌಕಾದಳ, ಸಿಐಎಸ್ಎಫ್, ಗುಪ್ತಚರ ಇಲಾಖೆಗಳ ಭದ್ರತಾ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ. ಬಳಿಕ ಕಾರ್ಯಾಚರಣೆ ಯಾವ ರೀತಿ ನಡೆಯಿತು ಎನ್ನುವುದನ್ನು ಪರಿಶೀಲಿಸಿ ತೊಡಕುಗಳಿದ್ದಲ್ಲಿ ಅವುಗಳನ್ನ ಸುಧಾರಿಸಿ ಭದ್ರತೆಯನ್ನು ಬಲಪಡಿಸುವ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಸಾಗರ ಕವಚ ಅಣಕು ಕಾರ್ಯಾಚರಣೆಗೆ ಸಾರ್ವಜನಿಕರಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಈ ರೀತಿಯ ಕ್ರಮ ಒಂದೆರಡು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ಕಾರ್ಯೋನ್ಮುಖರಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.