Uttara Kannada: ರಾಮನಗುಳಿ-ಡೋಂಗ್ರಿ ತೂಗು ಸೇತುವೆಗೆ ಶಂಕು ಸ್ಥಾಪನೆ, ಸುವರ್ಣ ಇಂಪ್ಯಾಕ್ಟ್
ಅಂಕೋಲಾದ ಡೋಂಗ್ರಿಯಲ್ಲಿ ಕೊಚ್ಚಿ ಹೋಗಿದ್ದ ತೂಗು ಸೇತುವೆಗೆ ಬದಲಾಗಿ ಇದೀಗ 3 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ.
ಉತ್ತರ ಕನ್ನಡ (ಫೆ.14): ಜಿಲ್ಲೆಯಲ್ಲಿ 2019ರಲ್ಲಿ ಕಾಣಿಸಿಕೊಂಡ ಭಾರೀ ಪ್ರವಾಹದಿಂದಾಗಿ ಅಂಕೋಲಾ ತಾಲೂಕಿನ ರಾಮನಗುಳಿ ಹಾಗೂ ಡೋಂಗ್ರಿ ಗ್ರಾಮದಲ್ಲಿ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಪ್ರಮುಖ ರಸ್ತೆಗೆ ಸಂಪರ್ಕ ಸಾಧ್ಯವಾಗದೇ ಜನರು ನದಿ ದಾಟಲು ತೆಪ್ಪ ಹಾಗೂ ಸಣ್ಣ ಬೋಟ್‌ಗೆ ಅವಲಂಭಿತರಾಗಬೇಕಾದ ಸ್ಥಿತಿ ಎದುರಾಗಿತ್ತು. ಜನರ ಸಂಕಷ್ಟದ ಸ್ಥಿತಿಯನ್ನು ವರದಿ ಮಾಡಿ ಸರಕಾರದ ಗಮನ ಸೆಳೆದಿದ್ದ ಏಷಿಯಾನೆಟ್ ಸುವರ್ಣ ನ್ಯೂಸ್ ಇಲ್ಲಿನ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಿಕೊಡುವಲ್ಲಿ ಯಶಸ್ಸು ಕಂಡಿತ್ತು. ಇದೀಗ ರಾಮನಗುಳಿ ಹಾಗೂ ಡೋಂಗ್ರಿ ಗ್ರಾಮಕ್ಕೆ ಸೇತುವೆ ಭಾಗ್ಯ ಒದಗಿಬಂದಿದ್ದು, ಜನರಂತೂ ಫುಲ್ ಖುಷ್ ಆಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ರಾಮನಗುಳಿ ಮತ್ತು ಡೋಂಗ್ರಿಯಲ್ಲಿ ಗಂಗಾವಳಿ ನದಿ ದಾಟಲು 2016ರಲ್ಲಿ ತೂಗು ಸೇತುವೆ ಮಾಡಲಾಗಿತ್ತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಜನರಿಗೆ ಸುಂಕಸಾಳ, ಅಂಕೋಲಾ ಹಾಗೂ ಯಲ್ಲಾಪುರ ಕಡೆ ತೆರಳಲು ಅನುಕೂಲ ಆಗುತ್ತಿತ್ತಲ್ಲದೇ, ವಿದ್ಯಾರ್ಥಿಗಳಿಗೆ ಕೂಡಾ ಶಾಲೆ, ಕಾಲೇಜಿಗೆ ತೆರಳಲು ಇದು ತುಂಬಾ ಹತ್ತಿರವಾಗುತ್ತಿತ್ತು. ಆದರೆ, 2019ರಲ್ಲಿ ಕಾಣಿಸಿಕೊಂಡ ಭಾರೀ ಮಳೆಯಿಂದಾಗಿ ಗಂಗಾವಳಿ ನದಿಯಲ್ಲಿ ಉಕ್ಕೇರಿದ ಪ್ರವಾಹಕ್ಕೆ ಎರಡೂ ಹ್ಯಾಂಗಿಂಗ್ ಬ್ರಿಡ್ಜ್ ಕೊಚ್ಚಿಕೊಂಡು ಹೋಗಿತ್ತು.
Karwar: ಟ್ಯಾಂಕರ್‌ಗಳಿಗೆ ಬೇಕು ನಿಯಂತ್ರಣ, ಸಾರ್ವಜನಿಕರ ಒತ್ತಾಯ
ಇದರಿಂದಾಗಿ ಪ್ರಮುಖ ರಸ್ತೆಗಳ ಸಂಪರ್ಕವೇ ಕಡಿದು ಹೋಗಿ ಜನರು ದ್ವೀಪದ ನಡುವೆ ಜೀವನ ಸಾಗಿಸಬೇಕಾದ ಸ್ಥಿತಿಯುಂಟಾಗಿತ್ತು. ಇಲ್ಲಿನ ನಿವಾಸಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ತೆಪ್ಪ ಅಥವಾ ಸಣ್ಣ ಬೋಟ್ ಮೂಲಕವೇ ಗಂಗಾವಳಿ ನದಿಯನ್ನು ದಾಟಿಕೊಂಡು ತಮ್ಮ ಕೆಲಸ, ಶಾಲೆ, ಕಾಲೇಜು ಹಾಗೂ ವಾಪಾಸ್ ತಮ್ಮ ಮನೆಗಳತ್ತ ಸಾಗಬೇಕಿತ್ತು. ಜನರ ಸಂಕಷ್ಟದ ಸ್ಥಿತಿಯನ್ನು ವರದಿ ಮಾಡಿದ್ದ ಏಷಿಯಾನೆಟ್ ಸುವರ್ಣ ನ್ಯೂಸ್, ಸರಕಾರದ ಗಮನ ಸೆಳೆದದ್ದಲ್ಲದೇ ಡೋಂಗ್ರಿ ವ್ಯಾಪ್ತಿಯ ಮಕ್ಕಳಿಗಾಗಿ ಬಸ್ ವ್ಯವಸ್ಥೆ ಮಾಡಿಸಿಕೊಡಲು ಯಶಸ್ವಿಯಾಗಿತ್ತು. ಈ ವೇಳೆ ಏಷಿಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದ ಶಾಸಕಿ ರೂಪಾಲಿ ನಾಯ್ಕ್, ಜನರಿಗೆ ಪರಿಹಾರದ ಆಶ್ವಾಸನೆ ನೀಡಿದ್ದರು. ಇದೀಗ ತಾವು ನೀಡಿದ ಮಾತಿನಂತೆ ರಾಮನಗುಳಿ ಹಾಗೂ ಡೋಂಗ್ರಿಯಲ್ಲಿ ಸೇತುವೆ ನಿರ್ಮಾಣದ ಶಂಕು ಸ್ಥಾಪನೆ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳಂತೂ ಸಾಕಷ್ಟು ಸಂತೋಷವಾಗಿದ್ದಾರೆ.
ಅಂಕೋಲಾದ ಡೋಂಗ್ರಿಯಲ್ಲಿ ಕೊಚ್ಚಿ ಹೋಗಿದ್ದ ತೂಗು ಸೇತುವೆಗೆ ಬದಲಾಗಿ ಇದೀಗ 3 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಇನ್ನು ರಾಮನಗುಳಿ ತೂಗು ಸೇತುವೆ ಕೊಚ್ಚಿ ಹೋದ ಕಾರಣ ಈ ಪ್ರದೇಶದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ರಾಮನಗುಳಿ ಶಾಶ್ವತ ಸೇತುವೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ಸಂಭ್ರಮದಿಂದ ನಡೆದಿದ್ದು, ಸ್ಥಳೀಯ ನಿವಾಸಿಗಳು ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಪುಷ್ಪವರ್ಷ ಮಾಡಿ ಸ್ವಾಗತಿಸಿದ್ದಾರೆ. ಖುದ್ದಾಗಿ ಕೋಟ ಶ್ರೀನಿವಾಸ ಪೂಜಾರಿಯವರೇ ಈ ಕಾಮಗಾರಿಗೆ ಅಡಿಗಲ್ಲು ಹಾಕಿದ್ದು, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ಧಿ ಹಾಗೂ ಗಣಪತಿ ಉಳ್ವೇಕರ್ ಸಾಥ್ ನೀಡಿದ್ದಾರೆ. ಸಾಕಷ್ಟು ಸಮಯಗಳಿಂದ ಜನರಿಗೆ ಅಗತ್ಯವಿದ್ದ ಸೇತುವೆ ನಿರ್ಮಾಣವನ್ನು ಇದೀಗ ಪ್ರಾರಂಭಿಸಲಾಗಿದ್ದು, ಶಾಸಕಿಯವರ ಪ್ರಯತ್ನವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದ್ದಾರೆ.