Karwar: ಟ್ಯಾಂಕರ್‌ಗಳಿಗೆ ಬೇಕು ನಿಯಂತ್ರಣ, ಸಾರ್ವಜನಿಕರ ಒತ್ತಾಯ

ಉತ್ತರಕನ್ನಡ ಜಿಲ್ಲೆಯ ಜನರು‌ ಇದೀಗ ಟ್ಯಾಂಕರ್‌ಗಳನ್ನು ನೋಡಿ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪ್ರತೀ ದಿನ-ರಾತ್ರಿ ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ ಅಪಘಾತಕ್ಕೊಳಗಾಗುತ್ತಿರುವುದು. 

First Published Feb 7, 2022, 5:22 PM IST | Last Updated Feb 7, 2022, 5:48 PM IST

ಉತ್ತರಕನ್ನಡ (ಫೆ, 07): ಜಿಲ್ಲೆಯ ಜನರು‌ ಇದೀಗ ಟ್ಯಾಂಕರ್‌ಗಳನ್ನು ನೋಡಿ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪ್ರತೀ ದಿನ-ರಾತ್ರಿ ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ ಅಪಘಾತಕ್ಕೊಳಗಾಗುತ್ತಿರುವುದು. ಕಳೆದ ಒಂದು ವರ್ಷದ ಅವಧಿಯಲ್ಲೇ 19ರಷ್ಟು ಟ್ಯಾಂಕರ್ ಅಪಘಾತಗಳು ಜಿಲ್ಲೆಯಲ್ಲಿ ಸಂಭವಿಸಿದ್ದು, ಟ್ಯಾಂಕರ್‌ಗಳ ಸಂಚಾರದ ಮೇಲೆ ನಿಯಂತ್ರಣ ಹೇರಲು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. 

ಪ್ರವಾಸಿಗರಿಗೆ ಮೆಚ್ಚಿನ ಪ್ರದೇಶವಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಆಗಾಗ್ಗೆ ಟ್ಯಾಂಕರ್‌ಗಳ ಅಪಘಾತ ಸಂಭವಿಸುತ್ತಲೇ ಇವೆ. ಪ್ರತೀನಿತ್ಯ ಮಂಗಳೂರಿನಿಂದ ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಗೆ ತೆರಳುವ ಗ್ಯಾಸ್, ಡೀಸೆಲ್, ಪೆಟ್ರೋಲ್, ಮೊಲಾಸಿಸ್ ಸೇರಿದಂತೆ ವಿವಿಧ ಬಗೆಯ ರಾಸಾಯನಿಕಗಳನ್ನು ಸಾಗಿಸುವ ಟ್ಯಾಂಕರ್‌ಗಳು ಹೆಚ್ಚಾಗಿ ಉತ್ತರಕನ್ನಡ ಜಿಲ್ಲೆಯ ಮಾರ್ಗವಾಗಿಯೇ ಸಂಚರಿಸುತ್ತವೆ. ಆದ್ರೆ, ಹೀಗೆ ಸಂಚರಿಸುವ ಟ್ಯಾಂಕರ್‌ಗಳು ಚಾಲಕರ ನಿರ್ಲಕ್ಷ್ಯತನದಿಂದಲೋ ಅಥವಾ ನಿಯಂತ್ರಣ ತಪ್ಪಿಯೋ ಪದೇ ಪದೇ ಅಪಘಾತಕ್ಕೆ ಒಳಗಾಗುತ್ತಿದ್ದು, ಪ್ರತೀ ಬಾರಿ ದೊಡ್ಡ ಗಂಡಾಂತರವನ್ನೇ ಸೃಷ್ಠಿಸುತ್ತಿದೆ. 

Karwar: ಘನತ್ಯಾಜ್ಯ ವಿಲೇವಾರಿ ಘಟಕದಿಂದ ಪ್ರಕೃತಿ-ಪಕ್ಷಿ ಸಂಕುಲಕ್ಕೆ ಕಂಟಕ

ದಕ್ಷಿಣಕನ್ನಡದಲ್ಲಿ ಪೆರ್ನೆಯ ಘಟನೆಯ ಬಳಿಕ 2015ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದಲ್ಲಿ ಸಂಭವಿಸಿದ್ದ ಗ್ಯಾಸ್ ಟ್ಯಾಂಕರ್ ದುರಂತ ಅತೀ ದೊಡ್ಡ ಅವಘಡವಾಗಿದ್ದು, ಇದರಲ್ಲಿ13ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಇನ್ನು ಕಳೆದ 2021ರ ಅಕ್ಟೋಬರ್‌ನಲ್ಲಿ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಬೆಂಝೀನ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಅಪಘಾತಕ್ಕೊಳಗಾಗಿ ಸೋರಿಕೆಯಾಗಿದ್ದು, ಎಕರೆಗಟ್ಟಲೇ ಪ್ರದೇಶದಲ್ಲಿ ಅಗ್ನಿ ಆವರಿಸಿಕೊಂಡಿತ್ತು. ಹೀಗೆ ತಿಂಗಳಿಗೊಂದರಂತೆ ಜಿಲ್ಲೆಯ ವಿವಿಧೆಡೆ ಹೆದ್ದಾರಿಯಲ್ಲಿ ಟ್ಯಾಂಕರ್‌ಗಳು ಅಪಘಾತಕ್ಕೀಡಾಗುತ್ತಿದ್ದು, ಕೆಲವೆಡೆ ಜನವಸತಿ ಪ್ರದೇಶಗಳ ಸಮೀಪದಲ್ಲೂ ಅಪಘಾತಗಳು ಸಂಭವಿಸಿವೆ. ಬಹುತೇಕ ಅಪಘಾತಗಳಲ್ಲಿ ಚಾಲಕರ ನಿರ್ಲಕ್ಷ್ಯತನವೇ ಎದ್ದು ಕಾಣುತ್ತಿದ್ದು, ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಂಕರ್‌ಗಳ ಮೇಲೆ ನಿಗಾವಹಿಸಬೇಕು  ಸಾರ್ವಜನಿಕರು ಮನವಿ ಮಾಡಿದ್ದಾರೆ. 

ಅಂದಹಾಗೆ, 2015ರಲ್ಲಿ ಕುಮಟಾ ಬರ್ಗಿ ದುರಂತ ಸಂಭವಿಸಿದ ಬಳಿಕ ಜಿಲ್ಲಾಡಳಿತ ಜಿಲ್ಲೆಯಲ್ಲಿ ಟ್ಯಾಂಕರ್‌ಗಳ ಸಂಚಾರಕ್ಕೆ ಕೆಲವೊಂದು ನಿಯಮಗಳನ್ನ ರೂಪಿಸಿತ್ತು. ಟ್ಯಾಂಕರ್‌ಗಳಲ್ಲಿ ಚಾಲಕನೊಂದಿಗೆ ಕ್ಲೀನರ್‌ಗಳು ಕಡ್ಡಾಯವಾಗಿ ಇರಲೇಬೇಕು ಹಾಗೂ ರಾತ್ರಿ ವೇಳೆಯಲ್ಲಿ ಟ್ಯಾಂಕರ್‌ಗಳು ಸಂಚರಿಸುವಂತಿಲ್ಲ ಸೇರಿದಂತೆ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಟ್ಯಾಂಕರ್‌ಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ಜಿಲ್ಲೆಯ ಜನರು ಟ್ಯಾಂಕರ್‌ಗಳನ್ನು ಕಂಡರೆ ಆತಂಕ ಪಡುವಂತಾಗಿದೆ. ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೇಳಿದ್ರೆ ಜಿಲ್ಲೆಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ 19 ಟ್ಯಾಂಕರ್ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತಗಳ ಆಧಾರದಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳನ್ನು ರಚಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಂಚರಿಸುವ ಟ್ಯಾಂಕರ್‌ಗಳ ಮೇಲೆ ನಿಗಾ ಇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

Video Top Stories