ಪಾಲಿಕೆ ಯಡವಟ್ಟಿಗೆ ಜನ ಜೀವನ ಅಸ್ತವ್ಯಸ್ತ: ರಸ್ತೆಯನ್ನೇ ಪಾರ್ಕ್ ಮಾಡಲು ಮುಂದಾದ ಪಾಲಿಕೆ

ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿರುವ ದೃಶ್ಯ. ಮತ್ತೊಂದೆಡೆ ರಸ್ತೆ ಇಲ್ಲದೆ ಬೇಸತ್ತ ಸಾರ್ವಜನಿಕರು. ಅಷ್ಟಕ್ಕೂ ಇಲ್ಲಿ ರಸ್ತೆಯೇ ಇರಲಿಲ್ಲ ಅಂತಲ್ಲ. ಕಳೆದ ಹತ್ತಾರು ವರ್ಷಗಳಿಂದ ಈ ಜನರು ಓಡಾಡುತ್ತಿದ್ದ ರಸ್ತೆ ಈಗ ಇದ್ದಕ್ಕಿದ್ದ ಹಾಗೆ ಮಾಯವಾಗಿಬಿಟ್ಟಿದೆ.
 

First Published Sep 13, 2023, 10:25 AM IST | Last Updated Sep 13, 2023, 10:25 AM IST

ರಸ್ತೆ ಎಲ್ಲಿ ಹೋಯ್ತು ಅಂತೀರಾ.. ಇದು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಡಿದ ಯಡವಟ್ಟು. ಪಾಲಿಕೆ ವ್ಯಾಪ್ತಿಯ 28ನೇ ವಾರ್ಡ್‌ಗೆ ಸೇರುವ ಸರಸ್ವತಿಪುರಂನ 10ನೇ A ಕ್ರಾಸ್‌ನ ಜನರಿಗೆ ರಸ್ತೆಯಿತ್ತು. ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ (houses)ಅನುಕೂಲವಾಗಿದ್ದ ಈ ರಸ್ತೆ ಜಾಗದಲ್ಲಿಯೇ ಹೊಸ ಪಾರ್ಕ್(Park) ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಇಲ್ಲಿನ ಜನ ಐದು ನಿಮಿಷ‌ದ ದಾರಿ ಬದಲು ಈಗ ಒಂದೂವರೆ ಕಿಲೋಮೀಟರ್ ಸುತ್ತಿ ಬಳಸಿ ಮನೆ ಸೇರುವಂತಾಗಿದೆ. 30 ವರ್ಷದ ಹಿಂದೆ ಸೂಕ್ತ ರಸ್ತೆ ಇಲ್ಲದ ಬಡಾವಣೆ ನಕ್ಷೆಗೆ  ಟೂಡಾ ಹಾಗೂ ಪಾಲಿಕೆ ಅಧಿಕಾರಿಗಳು ಎನ್‌ಒಸಿ ನೀಡಿದ್ದಾರೆ. ಈ ವಿಚಾರ ಕೋರ್ಟ್ ಗಮನಕ್ಕೆ ತರದೆ, ವಾಸ್ತವ ಪರಿಸ್ಥಿತಿ ಮುಚ್ಚಿಟ್ಟ  ಪರಿಣಾಮ, ಕೋರ್ಟ್ ನಿಂದ ವ್ಯತಿರಿಕ್ತ ತೀರ್ಪು ಬಂದಿದೆ. ವಾಸ್ತವಿಕವಾಗಿ ಈ ಬಡಾವಣೆಗೆ ಸೂಕ್ತ ರಸ್ತೆ ಇಲ್ಲದೆ ಇರುವುದು ಹಾಗೂ ಬಡಾವಣೆಯ ಬೇರೆ ಕಡೆ ಪಾರ್ಕ್ ಜಾಗ ಇರುವುದನ್ನು ಅಧಿಕಾರಿಗಳು ಕೋರ್ಟ್ ಗಮನಕ್ಕೆ ತಂದಿಲ್ಲ, ತಮ್ಮ ಯಡವಟ್ಟು ಮುಚ್ಚಿ ಹಾಕೊಳ್ಳಲು ಹಾಗೂ ಹೈ ಕೋರ್ಟ್(High court) ನಿಂದ ಛೀಮಾರಿ ಹಾಕಿಸಿಕೊಳ್ಳೋದನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ.


ಸದ್ಯ ಇಲ್ಲಿನ ರಸ್ತೆ‌ ಮುಚ್ಚಿ‌ ಪಾರ್ಕ್ ನಿರ್ಮಾಣ ಮಾಡುವಂತೆ ಹೈ ಕೋರ್ಟ್ ಆದೇಶ ನೀಡಿದೆ. ಇದರ ವಿರುದ್ಧ 2022ರಲ್ಲೇ ಬಡಾವಣೆಯ ನಿವಾಸಿಗಳಾದ ಗಂಗಯ್ಯ, ಬಸವರಾಜು, ನರಸಪ್ಪ, ಲಕ್ಕಪ್ಪಗೌಡ, ರಂಗಮ್ಮ, ದೇವಿಕಾ ಎಂಬುವರು ತುಮಕೂರು ಪಾಲಿಕೆ ಕಮಿಷನರ್,‌ ಡೆಪ್ಯೂಟಿ ಕಮಿಷನರ್, ಟೂಡಾ ಕಮಿಷನರ್, ಸ್ಮಾರ್ಟ್ ಸಿಟಿ ಎಂಡಿ, ಟೂಡಾ ಅಧ್ಯಕ್ಷರ ವಿರುದ್ದ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ರು. ಆದ್ರೆ ಪ್ರಯೋಜನವಾಗಿಲ್ಲ. 

ಇದನ್ನೂ ವೀಕ್ಷಿಸಿ:  ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ