BIG3: 10 ವರ್ಷದಿಂದ ಹಾಲಿನ ಡೈರಿಯೇ ಆಸ್ಪತ್ರೆ: ಸದನದಲ್ಲಿ ಸದ್ದು ಮಾಡಿದ್ದರೂ ಬಗೆಹರಿಯದ ಸಮಸ್ಯೆ
ಕೈಯಿಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನುವ ಹಾಗೇ ಆಗಾಗಿದೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಡೇನಹಳ್ಳಿ ಗ್ರಾಮದ ಜನರ ಪರಿಸ್ಥಿತಿ.ಕಳೆದ 10 ವರ್ಷದಿಂದ ಆಸ್ಪತ್ರೆ ಸಮಸ್ಯೆ ಮಾತ್ರ ಸಮಸ್ಯೆ ಆಗಿಯೇ ಉಳಿದಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಡೇನಹಳ್ಳಿ ಗ್ರಾಮಕ್ಕೆ, 2011ರಲ್ಲಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮಂಜೂರು ಮಾಡಲಾಗಿದ್ದು, ಆಸ್ಪತ್ರೆಗೆ ಕಟ್ಟಡ ಇಲ್ಲದ ಕಾರಣ ಗ್ರಾಮದಲ್ಲಿದ್ದ ಹಾಲಿನ ಡೈರಿ ಕಟ್ಟಡದಲ್ಲೇ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಯ್ತು. ಆ ಸಂದರ್ಭದಲ್ಲಿ ಶೀಘ್ರದಲ್ಲೇ ಆಸ್ಪತ್ರೆ ಕಟ್ಟಡ ನಿರ್ಮಿಸುವುದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ರು. ಆದ್ರೆ ಅಲ್ಲಿಂದ ಇಲ್ಲಿಯವರೆಗೂ ಭರವಸೆ ಮಾತ್ರ ಹಾಗೆ ಉಳಿದಿದೆ. ಆಸ್ಪತ್ರೆ ಪ್ರಾರಂಭವಾಗಿ 10 ವರ್ಷ ಕಳೆದರು ಸ್ವಂತ ಕಟ್ಟಡವಿಲ್ಲದೆ ಹಾಲಿನ ಡೈರಿ ಕಟ್ಟಡದಲ್ಲೇ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.ಗೋಮಾಳದ 2 ಎಕರೆ ಜಾಗವನ್ನು ಈ ಪ್ರಾಥಮಿಕ ಆಸ್ಪತ್ರೆ ಕಟ್ಟಡ ಕಟ್ಟುವ ಸಲುವಾಗಿ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ಒಂದು ಬೋರ್ಡ್ ಹಾಕಿದ್ದು ಬಿಟ್ಟರೆ, ಬೇರೆ ಯಾವುದೇ ಕೆಲಸವಾಗಿಲ್ಲ. ಈ ಖಾಲಿ ಜಾಗ ಇದೀಗ ಕುಡುಕರ ಅಡ್ಡೆಯಾಗಿದೆ.