ಕಾರು ಡಿಕ್ಕಿ ಹೊಡೆದ ರಭಸಕ್ಕೆ ದೂರ ಚಿಮ್ಮಿದ ಮಹಿಳೆ: ಅಪಘಾತದ ದೃಶ್ಯ ವೈರಲ್
ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ.
ಮಂಗಳೂರು: ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ಮೂಲ್ಕಿ ಮೂಡಬಿದಿರೆ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದ ದೃಶ್ಯ ಅಲ್ಲೇ ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸುರತ್ಕಲ್ ನಿಂದ ಮೂಡಬಿದ್ರಿಗೆ ತೆರಳುತ್ತಿದ್ದ ಬ್ರೀಝಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಪಕ್ಷಿಕೆರೆ ನಿವಾಸಿ ಜಯಂತಿ ಶೆಟ್ಟಿ (50) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕಾರಿನಲ್ಲಿದ್ದ ಚಾಲಕ ಅಬ್ದುಲ್ ಖಾದರ್ (65) ಕೌಸರ್ (46), ರಿದಾ (16), ರಝ್ಮಿ (18) ಎಂಬುವವರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಅಪಘಾತದಿಂದ ಗಂಭೀರ ಗಾಯಗೊಂಡ ಜಯಂತಿ ಶೆಟ್ಟಿ ಅವರು ವಾರದ ಸಂತೆಗೆ ತೆರಳಿ ತರಕಾರಿ ತೆಗೆದುಕೊಂಡು ಮನೆಗೆ ಮರಳುತ್ತಿದ್ದಾಗ ಕಿನ್ನಿಗೋಳಿ ರಸ್ತೆಯಲ್ಲಿ ಈ ಅನಾಹುತ ಸಂಭವಿಸಿದೆ. ಕಾರಿ ಡಿಕ್ಕಿಯಾದ ರಭಸಕ್ಕೆ ಅವರು ದೂರ ಚಿಮ್ಮಿ ಬಿದ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.