Asianet Suvarna News Asianet Suvarna News

Karwar: ಜನಪ್ರತಿನಿಧಿಗಳು, ಮೀನುಗಾರರ ಮಧ್ಯೆ ವಾಗ್ಯುದ್ಧ: ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ..!

*  ಸಾಗರಮಾಲಾ‌ ಯೋಜನೆ ಕುರಿತ ಸಭೆಯಲ್ಲಿ ಮಾತಿನ ಚಕಮಕಿ
*  ಯೋಜನೆ ಪ್ರಾರಂಭಿಸಿದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ 
*  ಅಂತಿಮ ನಿರ್ಣಯ ಕಾಣದೇ ಮುಕ್ತಾಯಗೊಂಡ ಸಾಗರಮಾಲಾ ಸಭೆ 
 

ಕಾರವಾರ(ಮಾ.15): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಗೆ ಕಳೆದೆರಡು ವರ್ಷಗಳಿಂದ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈ ಯೋಜನೆಯನ್ನು ಹಿಂಪಡೆಯಬೇಕೆಂದು ಮೀನುಗಾರರು ಕೂಡಾ ಸಾಕಷ್ಟು ಹೋರಾಟ ಕೂಡಾ ನಡೆಸಿದ್ದರು. ಇದೇ ವಿಚಾರವಾಗಿ ಮೀನುಗಾರರ ಜತೆ ಚರ್ಚೆ ನಡೆಸಲು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್. ಅಂಗಾರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಸ್ಪಷ್ಟ ಮಾಹಿತಿಯೊಂದಿಗೆ ಯಾವುದೇ ವಿರೋಧವಿಲ್ಲದೇ ಮುಕ್ತಾಯವಾಗಬೇಕಿದ್ದ ಸಭೆ ಮಾತ್ರ ಗದ್ದಲ ಹಾಗೂ ಮಾತಿನ ಚಕಮಕಿಯೊಂದಿಗೆ ಮುಕ್ತಾಯಗೊಂಡಿದೆ. 

ಪ್ರಾರಂಭದಲ್ಲಿ ರಾಜ್ಯ ಸರ್ಕಾರ ಕಾರವಾರ ಹೊರಭಾಗದ ಮಾಜಾಳಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆಂದು 250 ಕೋಟಿ ರೂ. ಬಿಡುಗಡೆ ಮಾಡಿದ ವಿಚಾರ ಹಾಗೂ ಸ್ಥಳೀಯರ ಬೇಡಿಕೆ, ವಿರೋಧಗಳ ವಿಚಾರ ಮಂಡನೆಯಾಯ್ತಾದ್ರೂ, ಬಳಿಕ ಪ್ರಸ್ತಾವಿಸಲ್ಪಟ್ಟ ಸಾಗರಮಾಲಾ ಯೋಜನೆಯ ವಿಚಾರ ಮೀನುಗಾರರು ಹಾಗೂ ಜನಪ್ರತಿನಿಧಿಗಳ‌‌ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಮೀನುಗಾರಿಕಾ ಸಚಿವ ಎಸ್. ಅಂಗಾರ ಮುಂದೆಯೇ ಮೀನುಗಾರರು ಶಾಸಕಿ ಜತೆ ವಾಗ್ವಾದಕ್ಕಿಳಿದಿದ್ದು,  ಸಾಗರ ಮಾಲಾ ಯೋಜನೆ ಕೈಬಿಟ್ಟಿಲ್ಲಂದ್ರೆ ಸಾಮೂಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೀನುಗಾರರು ಎಚ್ಚರಿಸಿ ಗೊಬ್ಬೆ ಹಾಕಿದರು.

Karnataka Cabinet Expansion: ಬೊಮ್ಮಾಯಿ ಸಂಪುಟದಲ್ಲಿ ನಾಲ್ವರು ಡಿಸಿಎಂ..?

ಮೀನುಗಾರರ ಮಾತು ಕೇಳಿ ಗರಂ ಆದ ಎಂಎಲ್‌ಸಿ ಹಾಗೂ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್, ಮಾತು ಸ್ಥಿಮಿತದಲ್ಲಿರಲಿ, ಸಚಿವರು ಇದ್ದಾಗಲೇ ಅವಾಜ್ ಎಲ್ಲಾ ಹಾಕೋದು ಸರಿಯಲ್ಲ. ಶಾಸಕರು, ಸಚಿವರು ಮುಂದೆ ಸರಿಯಾಗಿ ಮಾತನಾಡಿ, ಹುಷಾರ್... ಎಂದರು ಎಚ್ಚರಿಕೆ ನೀಡಿದರು. ಗಣಪತಿ ಉಳ್ವೇಕರ್ ಅವರ‌ ಮಾತಿಗೆ ದನಿಗೂಡಿಸಿದ ಶಾಸಕಿ ರೂಪಾಲಿ, ಮೀನುಗಾರ ಮಹಿಳೆಯನ್ನು ಉದ್ದೇಶಿಸಿ, ನೀವು ಯಾರಿಗೆ ಕೈ ತೋರಿಸಿ ಮಾತನಾಡ್ತೀರಾ..? ಕೈ ತೋರಿಸಿ ನನ್ನ ಮುಂದೆ ಜೋರು ಮಾತನಾಡಬೇಡಿ. ಕೇಂದ್ರ ಸರ್ಕಾರ ಈ ಯೋಜನೆಗೆ ಅನುದಾನ ನೀಡಿದ್ದು, ಕೋರ್ಟ್ ಕೂಡಾ ಯೋಜನೆಗೆ ಅಸ್ತು ಎಂದಿದೆ. ಈಗೇನು ಮಾಡಲಾಗಲ್ಲ ಎಂದು ಮೀನುಗಾರರಿಗೆ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಎಸ್. ಅಂಗಾರ ಎಲ್ಲರನ್ನೂ ಶಾಂತವಾಗಿರುವಂತೆ ಸೂಚಿಸಿ ತಮ್ಮ ಅಭಿಪ್ರಾಯ ಮಂಡಿಸಿದರು. 

ಮೀನುಗಾರ ಮುಖಂಡರು ಹೇಳುವ ಪ್ರಕಾರ, ಸೀಬರ್ಡ್ ಯೋಜನೆಯಿಂದ ಎಲ್ಲವನ್ನೂ ಕಳೆದುಕೊಂಡಿರೋದು ಮಾತ್ರವಲ್ಲದೇ, ಉದ್ಯೋಗದ ಭರವಸೆಯೂ ಈಡೇರಿಲ್ಲ. ಇದೀಗ ಮತ್ತೆ ಸಾಗರಮಾಲಾ ಯೋಜನೆಯಿಂದ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಈ ಯೋಜನೆ ಯಾವುದೇ ಕಾರಣಕ್ಕೂ ಬೇಡವೇ ಬೇಡ. ಮಂಗಳೂರು, ಉಡುಪಿಯಲ್ಲಿ ಇಲ್ಲದ ಯೋಜನೆಯನ್ನು ಉತ್ತರಕನ್ನಡ ಜಿಲ್ಲೆಗೇ ತಂದು ಹಾಕಲಾಗಿದೆ. ಹೊನ್ನಾವರ ಟೊಂಕದಲ್ಲೂ ಖಾಸಗಿ ಬಂದರು ನಿರ್ಮಾಣಕ್ಕೆ ಮುಂದಾಗಲಾಗುತ್ತಿದ್ದು, ಸಾಗರಮಾಲಾ ಹೆಸರಿನಲ್ಲಿ ಕಾರವಾರದಲ್ಲೂ ಬಂದರು ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಮುಂದಾದಲ್ಲಿ ಎಲ್ಲಾ ರೀತಿಯ ಹೋರಾಟಕ್ಕೂ ತಯಾರಾಗಿದ್ದು, ಜಿಲ್ಲೆಯ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತೇವೆ. ನಾವು ಸತ್ತರೂ ಸರಿಯೇ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಲ್ಲ ಎಂದು ಮೀನುಗಾರ ಮುಖಂಡರು ಎಚ್ಚರಿಕೆ ನೀಡಿದ್ದಾರೆ. 
 

Video Top Stories