Karwar: ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಪ್ರಕೃತಿ - ಪಕ್ಷಿ ಸಂಕುಲಕ್ಕೆ ಕಂಟಕ

ಪ್ರವಾಸಿಗರಿಗೆ ಅಚ್ಚು ಮೆಚ್ಚಿನ ತಾಣವಾಗಿರುವ ಉತ್ತರಕನ್ನಡ‌ (Uttara Kannada) ಜಿಲ್ಲೆಗೆ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆಲವು ಪ್ರವಾಸಿಗರು ಕರಾವಳಿ ಭಾಗವನ್ನು ಆಯ್ಕೆ ಮಾಡಿದರೆ, ಮತ್ತಷ್ಟು ಪ್ರವಾಸಿಗರು ಕಾಡುಭಾಗಗಳಾದ ಜೊಯಿಡಾ, ದಾಂಡೇಲಿಯಲ್ಲಿ ನೆಲೆಯಾಗಲು ಬಯಸುತ್ತಾರೆ. 

First Published Feb 7, 2022, 5:12 PM IST | Last Updated Feb 7, 2022, 5:46 PM IST

ಕಾರವಾರ (ಫೆ. 07): ಪ್ರವಾಸಿಗರಿಗೆ ಅಚ್ಚು ಮೆಚ್ಚಿನ ತಾಣವಾಗಿರುವ ಉತ್ತರಕನ್ನಡ‌ (Uttara Kannada) ಜಿಲ್ಲೆಗೆ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆಲವು ಪ್ರವಾಸಿಗರು ಕರಾವಳಿ ಭಾಗವನ್ನು ಆಯ್ಕೆ ಮಾಡಿದರೆ, ಮತ್ತಷ್ಟು ಪ್ರವಾಸಿಗರು ಕಾಡುಭಾಗಗಳಾದ ಜೊಯಿಡಾ, ದಾಂಡೇಲಿಯಲ್ಲಿ ನೆಲೆಯಾಗಲು ಬಯಸುತ್ತಾರೆ. ಈ ತಾಲೂಕುಗಳ ನಿವಾಸಿಗಳು ಹಾಗೂ ಭೇಟಿ ನೀಡುವ ಪ್ರವಾಸಿಗರಿಂದ ಸಾಕಷ್ಟು ಪ್ರಮಾಣದ ಕಸಗಳು ಕೂಡಾ ಉತ್ಪತ್ತಿಯಾಗುತ್ತವೆ. 

ಈ ಕಾರಣದಿಂದ ಕಸ ಸಂಗ್ರಹಣೆ, ವಿಲೇವಾರಿ, ವಿಂಗಡಣೆ ಹಾಗೂ ಮರು ಬಳಕೆಯ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಜೊಯಿಡಾದ ಅವೇಡಾ ಗ್ರಾಮ ಪಂಚಾಯತ್‌ನ ಬಾಡಗುಂದದಲ್ಲಿ  ಕಸ ನಿರ್ವಹಣಾ ಘಟಕ ನಿರ್ಮಾಣ ಮಾಡಲು ತಯಾರಿ ನಡೆಸಿದೆ. ಅರಣ್ಯ ಇಲಾಖೆಗೆ ಸೇರಿದ ಕಾಳಿ ರಿವರ್ ರ್ಯಾಫ್ಟಿಂಗ್ ಪ್ರದೇಶದ ಬಳಿಯಿರುವ ಖಾಲಿ ಜಾಗದಲ್ಲಿ 11.82 ಲಕ್ಷ ರೂ. ವೆಚ್ಚದಲ್ಲಿ ಈ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುತ್ತಿದೆ. ಆದರೆ, ಈ ಘಟಕ ಸ್ಥಾಪನೆಯಾದಲ್ಲಿ ಕಾಳಿ ನದಿ ಹಾಗೂ ಪಕ್ಷಿ ಸಂಕುಲಕ್ಕೆ ಭಾರೀ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಬಾಡಗುಂದದ ಈ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕವಾದ್ರೆ ಕಾಳಿ ನದಿಗೆ ರಾಸಾಯಿಕ ನೀರು ಸೇರುವುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಬಹಳಷ್ಟು ವಿಶೇಷ ಎಂದೆನಿಸಿಕೊಂಡಿರುವ ಹಾರ್ನ್ ಬಿಲ್‌ ಪಕ್ಷಿಗಳ ಸಮೂಹಕ್ಕೆ ಈ ಘಟಕ ಕಂಟಕಪ್ರಾಯವಾಗಲಿದೆ. ಹಲವು ರೆಸಾರ್ಟ್, ಹೋಂ ಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಹಾರ್ನ್‌ಬಿಲ್‌ಗಳನ್ನು ನೋಡಲು ಹಾಗೂ ಅವುಗಳ ಫೋಟೊ ತೆಗೆಯಲು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೆ, ಈ ಘಟಕ ನಿರ್ಮಾಣವಾದಲ್ಲಿ ಪರಿಸರದ‌ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಪರಿಸರ ಪ್ರೇಮಿಗಳನ್ನು ಆತಂಕಕ್ಕೀಡು ಮಾಡಿದೆ. 

Karwar: ಟ್ಯಾಂಕರ್‌ಗಳಿಗೆ ಬೇಕು ನಿಯಂತ್ರಣ, ಸಾರ್ವಜನಿಕರ ಒತ್ತಾಯ

ಜಿಲ್ಲಾಡಳಿತದ ಯೋಜನೆ ಪ್ರಕಾರ, ಜೊಯಿಡಾ ಹಾಗೂ ದಾಂಡೇಲಿಯಿಂದ ಕಸ ಸಂಗ್ರಹಣೆ ಮಾಡಿ ಈ ಪ್ರದೇಶಕ್ಕೆ ತಂದು ವಿಂಗಡಣೆ ಮಾಡಲಾಗುತ್ತದೆ. ಕಸಗಳಲ್ಲಿ ಮೆಡಿಕಲ್ ವೇಸ್ಟ್, ಕೆಮಿಕಲ್ ವೇಸ್ಟ್ ಸೇರಿದಂತೆ ಹಲವು ಬಗೆಯ ಕಸಗಳ ರಾಶಿಗಳಿರುವುದರಿಂದ ಇವುಗಳಲ್ಲಿ ಇನ್ನಷ್ಟು ಭೀಕರ ವಿಷಗಳು ಉತ್ಪತ್ತಿಯಾಗುತ್ತದೆ. ಮಳೆ ಬಿದ್ದ ಸಂದರ್ಭದಲ್ಲಂತೂ ಈ ವಿಷ ಹರಿದುಹೋಗಿ ಪಕ್ಕದಲ್ಲೇ 86 ಮೀಟರ್ ದೂರದಲ್ಲಿ ಹರಿಯುವ ಕಾಳಿ ನದಿಗೆ ಸೇರುತ್ತದೆ. ಮೊದಲೇ ದಾಂಡೇಲಿಯ ಪೇಪರ್ ಪ್ರೊಡಕ್ಷನ್ ಕಂಪೆನಿಯ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳು ಸೇರ್ಪಡಗೊಂಡು ಕಾಳಿ ನದಿ ಬಹಳಷ್ಟು ಮಲಿನಗೊಂಡಿದೆ. 

ಇದೀಗ ಕಸದ ತ್ಯಾಜ್ಯದಿಂದ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯ ಮಿಶ್ರಣಗೊಂಡಲ್ಲಿ ಕಾಳಿ ನದಿ ಮತ್ತಷ್ಟು ವಿಷಕಾರಿಯಾಗಲಿದೆ. ಈ ನದಿಯ ನೀರನ್ನು ಜನರು ಹಾಗೂ ಪ್ರಾಣಿ- ಪಕ್ಷಿಗಳು ಸೇವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಲೆ ಬೀಳುವ ಸಾಧ್ಯತೆಗಳಿವೆ. ಇನ್ನು ಮತ್ತೊಂದು ವಿಚಾರವಂದ್ರೆ, ಅತೀ ವಿಶಿಷ್ಟ ಹಾಗೂ ಅತೀ ವಿಶೇಷವಾಗಿರುವ ಹಾರ್ನ್ ಬಿಲ್ ಪಕ್ಷಿಗಳು ಇದೇ ಸ್ಥಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಮಡ್ ಬಾಥ್, ಮಿಲನ ಕ್ರಿಯೆ ಹಾಗೂ ಮೊಟ್ಟೆಗಳನ್ನು ಇಡುವ ಪ್ರಕ್ರಿಯೆ ನಡೆಸುವುದರಿಂದ ಈ ಪ್ರದೇಶವೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.‌ ಈ ಎಲ್ಲಾ ಕಾರಣದಿಂದ ಬಾಡಗುಂದದ ಈ ಪ್ರದೇಶ ಬಿಟ್ಟು ಇತರ ಜಾಗದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಬೇಕೆಂದು ಪರಿಸರ ಪ್ರೇಮಿಗಳ ಒತ್ತಾಯ. 

Video Top Stories