Asianet Suvarna News Asianet Suvarna News

ಒಂಟಿಯಾಗಿ ಹೋರಾಡಿ ಜೀವತೆತ್ತ ಅರ್ಜುನ: ಕಾಡಾನೆ ಕಾರ್ಯಾಚರಣೆ ವೇಳೆ ಹಂಟರ್ ಸ್ಪೆಷಲಿಸ್ಟ್ ಸಾವು !

ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಬಲು ಚಾಣಾಕ್ಷ, ಬರೋಬ್ಬರಿ ಎಂಟು ಬಾರಿ ಮೈಸೂರು ದಸರೆಯಲ್ಲಿ ಚಿನ್ನದ ಅಂಬಾರಿಗೆ ಹೆಗಲಾಗುವ ಮೂಲಕ ವಿಶೇಷ ದಾಖಲೆ ಬರೆದಿದ್ದ, ಅಪಾರ ಮಂದಿಯ ಪ್ರೀತಿ ಪಾತ್ರನಾಗಿದ್ದ ಕ್ಯಾಪ್ಟನ್ ಅರ್ಜುನ ದುರಂತ ಸಾವಿಗೀಡಾಗಿದೆ. 

ಗತ್ತು ಗಾಂಭೀರ್ಯದ ಮೂಲಕ ರಾಜ್ಯದ ಜನ ಮನ ಗೆದ್ದಿದ್ದವನು ಅರ್ಜುನ. ಕಾಡುಪ್ರಾಣಿಗಳ ಆಪರೇಷನ್ ಅಂದ್ರೆ ಅಲ್ಲಿ ಅರ್ಜುನ ಕ್ಯಾಪ್ಟನ್ (Captain Arjuna) ಹಾಜರ್. ಬರೋಬ್ಬರಿ ಎಂಟು ಬಾರಿ ಚಾಮುಂಡಿ ಚಿನ್ನದ ಅಂಬಾರಿ ಹೊತ್ತು ಲಕ್ಷ ಲಕ್ಷ ಜನರ ಬಾಯಲ್ಲಿ ಅರ್ಜುನ ಹೆಸರು ಒತ್ತಿದ್ದ. ಆದರೆ ಈ ಅರ್ಜುನ ಆನೆ ಹಾಸನ(Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳೆಕೆರೆ, ದಬ್ಬಳ್ಳಿ ಫಾರೆಸ್ಟ್‌ನಲ್ಲಿ ಮೃತಪಟ್ಟಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಬಲಿಷ್ಟ ಕಾಡಾನೆ ಕಾಳಗ ನಡೆಸಿ ಬಲಿ ಪಡೆದಿದೆ. ನವೆಂಬರ್ 24ರಿಂದ ಪುಂಡಾನೆ ಸೆರೆ ಮತ್ತು ಸ್ಥಳಾಂತರ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ಶುರುವಾಗಿತ್ತು. ಯಸಳೂರು ಭಾಗದಲ್ಲಿ ಆಪರೇಷನ್ ಮುಂದುವರಿದಿತ್ತು. ಕ್ಯಾಪ್ಟನ್ ಅರ್ಜುನನ ಜೊತೆಗೆ ಉಳಿದ ಮೂರು ಪಳಗಿದ ಆನೆಗಳು ತೆರಳಿದ್ದವು. ಈ ವೇಳೆ ಬಲಿಷ್ಠ ಸಲಗನಿಗೆ ಅರವಳಿಕೆ ಚುಚ್ಚುಮದ್ದು ನೀಡುವ ವೇಳೆ ಏಕಾಏಕಿ ಪಳಗಿದ ಆನೆಗಳ(Elephant) ಮೇಲೆಯೇ ತಿರುಗಿ ಬಿದ್ದಿದೆ. ಕೂಡಲೇ ಅರ್ಜುನನ ಜೊತೆಯಲ್ಲಿದ್ದ ಮೂರು ಆನೆ ಹಿಂದಕ್ಕೆ ಬಂದ ಕಾರಣ ಪುಂಡಾನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಫಲ ನೀಡಲಿಲ್ಲ. ಕಡೆಗೆ ಅರ್ಜುನ ಎದೆಗುಂದದೆ ಹೋರಾಟಕ್ಕೆ ಇಳಿದ. ಅರ್ಜುನ ಮೇಲೆ ಕುಳಿತಿದ್ದ ವೈದ್ಯರು ಹಾಗೂ ಮಾವುತ ವಿನು ಸಹ ಜೀವ ಭಯದಿಂದ ಕೆಳಕ್ಕೆ ಧುಮುಕಿ ಜೀವ ಉಳಿಸಿಕೊಂಡಿದ್ದಾರೆ. ನಂತರ ಅರ್ಜುನನ ಸಾವಿಗೆ ಸುದ್ದಿ ಕೇಳಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ ವಿನು ಅಲಿಯಾಸ್ ವಿನೋದ್‌ನನ್ನು ಸ್ಥಳದಲ್ಲೇ ಇದ್ದ ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಏಕಾಂಗಿಯಾಗಿ ಅರ್ಜುನ ಕಾದಾಡುವಾಗಲೇ ದಢೂತಿ ಗಾತ್ರದ ಪುಂಡಾನೆ, ಅರ್ಜುನನ ಕಿಬ್ಬೊಟ್ಟೆಗೆ ಹರಿತವಾದ ಕೋರೆಯಿಂದ ಬಲವಾಗಿ ತಿವಿದಿದೆ. ಕೂಡಲೇ ಕುಸಿದು ಬಿದ್ದ ಅರ್ಜುನ, ತೀವ್ರ ರಕ್ತಸ್ರಾವದಿಂದ ಕೆಲ ಹೊತ್ತಿನಲ್ಲೇ ಪ್ರಾಣ ಬಿಟ್ಟಿದೆ.

ಇದನ್ನೂ ವೀಕ್ಷಿಸಿ:  ಹಾಸ್ಟೆಲ್ ಸಮಸ್ಯೆಗಳ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್ಸ್‌: ನೀರಿಗಾಗಿ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

Video Top Stories