ಕೊರೋನಾ ಭೀತಿ: ಕಲಬುರಗಿ ಸಂಪರ್ಕಿಸುವ ಎಲ್ಲ ಖಾಸಗಿ ಬಸ್ ರದ್ದು..!

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿಯಿಂದ ಹೊರಹೋಗುವ ಮತ್ತು ಒಳಬರುವ ಎಲ್ಲಾ ಖಾಸಗಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 

First Published Mar 18, 2020, 5:49 PM IST | Last Updated Mar 18, 2020, 5:49 PM IST

ಕಲಬುರಗಿ(ಮಾ.18): ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿಯಿಂದ ಹೊರಹೋಗುವ ಮತ್ತು ಒಳಬರುವ ಎಲ್ಲಾ ಖಾಸಗಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಖಾಸಗಿ ಟ್ರಾವೆಲರ್ಸ್‌‌ ಮತ್ತು ಬುಕ್ಕಿಂಗ್ ಏಜೆಂಟರ ಸಭೆಯಲ್ಲಿ ಅವರು ಸೂಚನೆ ನೀಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು, ಇತರೆ ಜಿಲ್ಲೆಗಳು, ನೆರೆರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಿಗೆ ತೆರಳುವ ಮತ್ತು ಜಿಲ್ಲೆಯೊಳಗೆ ಬರುವ ಬಸ್‌ಗಳ ಸಂಚಾರ ನಿಲ್ಲಿಸಬೇಕು. ಈಗಾಗಲೇ ಬುಕ್ಕಿಂಗ್ ಮಾಡಿರುವ ಸೀಟುಗಳ ಟಿಕೆಟ್ ಗಳನ್ನು ರದ್ದುಮಾಡುವಂತೆ ಬಸ್ ಮಾಲೀಕರು ಮತ್ತು ಏಜಂಟರಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!

ಮುಂದಿನ ಆದೇಶದವರೆಗೆ ಇದನ್ನು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ. ಒಂದುವೇಳೆ, ಈ ಸೂಚನೆಯನ್ನು ಮೀರಿ ಬಸ್ ಗಳ ಓಡಾಟ ನಡೆಸಿದಲ್ಲಿ, ಅಂತಹ ವಾಹನಗಳನ್ನು ಜಫ್ತಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ 17 ಚೆಕ್ ಪೋಸ್ಟ್ ತೆರೆದಿದ್ದು, ಬಸ್ ಗಳ ಸಂಚಾರದ ಮೇಲೆ ನಿಗಾವಹಿಸಲಾಗುತ್ತದೆ ಎಂದಿದ್ದಾರೆ.

ಇತ್ತೀಚೆಗೆ ಕೆಲವರು ಮುಂಬೈ,ಪುಣೆ,ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಇಳಿದು,ಬಸ್ ಗಳ ಮೂಲಕ ಕಲಬುರಗಿ ಜಿಲ್ಲೆಗೆ ಬಂದಿರುತ್ತಾರೆ. ಹಾಗಾಗಿ ಇದುವರೆಗೆ ಕಲಬುರಗಿ ನಗರ ಮತ್ತು ಜಿಲ್ಲೆಗೆ ಬಂದಿರುವ ಪ್ರಯಾಣಿಕರ ಸಂಪೂರ್ಣ ವಿವರ ನೀಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಏಜೆಂಟರಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಇದ್ದರು.