Acid Attack: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆ್ಯಸಿಡ್‌ ಸಂತ್ರಸ್ತೆ ಕುಟುಂಬ

*  ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿರುವ ತಂದೆ-ತಾಯಿ 
*  ದಾನಿಗಳ ಆರ್ಥಿಕ ಸಹಾಯಕ್ಕೆ ಎದುರು ನೋಡುತ್ತಿರುವ ಸಂತ್ರಸ್ತೆಯ ಪೋಷಕರು
*  ಕೂಲಿ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಸಾಕುತ್ತಿರುವ ತಂದೆ-ತಾಯಿ 
 

First Published Apr 30, 2022, 11:37 AM IST | Last Updated Apr 30, 2022, 11:37 AM IST

ಬೆಂಗಳೂರು(ಏ.30):  ಒಂದೆಡೆ ಮನೆಯ ಆಧಾರಸ್ತಂಭವಾಗಿದ್ದ ಮಗಳು ಕಿಡಿಗೇಡಿಯ ಆ್ಯಸಿಡ್‌ ದಾಳಿಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿರುವ ತಂದೆ-ತಾಯಿ ದಾನಿಗಳ ಆರ್ಥಿಕ ಸಹಾಯಕ್ಕೆ ಎದುರು ನೋಡುತ್ತಿದ್ದಾರೆ.

ಸುಂಕದಕಟ್ಟೆ ಬಳಿ ಗುರುವಾರ ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತರಕಾರಿ ವ್ಯಾಪಾರ ಮಾಡುವ ಸಂತ್ರಸ್ತೆಯ ತಂದೆ ರಾಜಣ್ಣ ಇದೀಗ ಮಗಳ ಚಿಕಿತ್ಸೆಗಾಗಿ ಹಣ ಹೊಂದಿಸಲು ಒದ್ದಾಡುತ್ತಿದ್ದಾರೆ. ರಾಜಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ. ಆರಂಭದಲ್ಲಿ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಣ್ಣ ಅವರು ಹೃದ್ರೋಗಿಯಾಗಿದ್ದಾರೆ. ಸದ್ಯ ತರಕಾರಿ ವ್ಯಾಪಾರ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

Udupi: ಸೇಂಟ್ ಮೆರೀಸ್ ದೀಪದಲ್ಲಿ ವಾಚ್ ಟವರ್, ಸೆಲ್ಫಿ ಪಾಯಿಂಟ್ ನಿರ್ಮಿಸಲು ತೀರ್ಮಾನ

ಹಿರಿಯ ಮಗಳ ಮದುವೆ ನಿಶ್ಚಯವಾಗಿದ್ದು, ಮೇ 7 ಮತ್ತು 8 ರಂದು ಮದುವೆ ದಿನಾಂಕ ಗೊತ್ತು ಮಾಡಲಾಗಿದೆ. ಈಗಾಗಲೇ ಸಾಲ ಮಾಡಿ ಮಗಳ ಮದುವೆಗೆ ತಯಾರಿ ನಡೆಸಿರುವ ರಾಜಣ್ಣ ಅವರ ಕುಟುಂಬಕ್ಕೆ ಎರಡನೇ ಮಗಳ ಮೇಲೆ ನಡೆದ ಆ್ಯಸಿಡ್‌ ದಾಳಿ ತೀವ್ರ ನೋವಿನ ಜತೆಗೆ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ರಾಜಣ್ಣ ಅವರ ಕುಟುಂಬ ಆರ್ಥಿಕ ಸಹಾಯಕ್ಕಾಗಿ ದಾನಿಗಳಿಗೆ ಎದುರು ನೋಡುತ್ತಿದೆ.

ಕೂಲಿ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಸಾಕಿದ್ದೇನೆ. ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ತರಕಾರಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಮುಂದಿನ ತಿಂಗಳು ಹಿರಿಯ ಮಗಳ ಮದುವೆಯಿದೆ. ಸಂಬಂಧಿಕರು, ಸ್ನೇಹಿತರಿಂದ ಸಾಲ ಪಡೆದು ಮದುವೆಗೆ ಸಿದ್ಧತೆ ಮಾಡಿದ್ದೇನೆ. ಇದೀಗ ಎರಡನೇ ಮಗಳ ಮೇಲೆ ಆ್ಯಸಿಡ್‌ ದಾಳಿಯಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ದಿಕ್ಕೇ ತೋಚದಾಗಿದೆ. ಹಲವರು ಆಸ್ಪತ್ರೆಗೆ ಬಂದು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ, ಈವರೆಗೂ ಯಾರಿಂದಲೂ ಒಂದು ರು. ನೆರವು ಬಂದಿಲ್ಲ. ಹೀಗಾಗಿ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ದಾನಿಗಳು ಆರ್ಥಿಕ ಸಹಾಯ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಸಂತ್ರಸ್ತೆಯ ತಂದೆ ರಾಜಣ್ಣ ‘ಕನ್ನಡಪ್ರಭ’ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.