
Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
ಹೈದರಾಬಾದ್‌ನ ಪೂರ್ಣಿಮಾ ಶಾಲೆಯಲ್ಲಿ, ಬಟ್ಟೆಯಲ್ಲಿ ಮೂತ್ರ ಮಾಡಿದ್ದಕ್ಕೆ ನರ್ಸರಿ ಬಾಲಕಿಯನ್ನು ಶಾಲೆಯ ಆಯಾ ಕ್ರೂರವಾಗಿ ಥಳಿಸಿದ್ದಾಳೆ. ಸ್ಥಳೀಯರು ಚಿತ್ರೀಕರಿಸಿದ ಈ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್ (ಡಿ.1):ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆಯೊಂದರಲ್ಲಿ, ಹೈದರಾಬಾದ್‌ನ ಶಾಪುರ್ ನಗರದ ಪೂರ್ಣಿಮಾ ಶಾಲೆಯ ನರ್ಸರಿ ಬಾಲಕಿಯನ್ನು ಶಾಲೆಯ ಆಯಾ, ಕ್ರೂರವಾಗಿ ಥಳಿಸಿ ನೆಲಕ್ಕೆ ತಳ್ಳಿದ ಘಟನೆ ನವೆಂಬರ್ 29 ರ ಶನಿವಾರ ನಡೆದಿದೆ. ನಂತರ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರೊಬ್ಬರು ಹಲ್ಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಬಾಲಕಿ ಕ್ಲಾಸ್‌ನಲ್ಲಿ ತನ್ನ ಬಟ್ಟೆಯಲ್ಲಿಯೇ ಮೂತ್ರ ಮಾಡಿದ್ದಳು. ಈ ವೇಳೆ ಶಿಕ್ಷಕಿ ಶಾಲೆಯ ಆಯಾಳನ್ನು ಕರೆದು ಆಕೆಯ ಬಟ್ಟೆಯನ್ನು ಬದಲಾಯಿಸುವಂತೆ ಹೇಳಿದ್ದರು. ಆದರೆ, ಬಾಲಕಿಗೆ ಡ್ರೆಸ್ ಬದಲಾಯಿಸಲು ಸಹಾಯ ಮಾಡುವ ಬದಲು, ಮುಕ್ತ ಆವರಣದಲ್ಲಿ ಆಕೆಯನ್ನು ಹೊಡೆಯಲು ಆರಂಭಿಸಿದ್ದಳು.
ಅಂದಾಜು 4 ನಿಮಿಷದ ವಿಡಿಯೋ ಇದಾಗಿದ್ದು, ಶಾಲೆಯ ಆಯಾ ಅತ್ಯಂತ ಕ್ರೂರವಾಗಿ ಬಾಲಕಿಯ ಜೊತೆ ವರ್ತಿಸಿದ್ದಾರೆ. ಆಕೆಯನ್ನು ನೆಲಕ್ಕೆ ಬಡಿದಿದ್ದು ಮಾತ್ರವಲ್ಲದೆ, ನಿರಂತರವಾಗಿ ಆಕೆಯ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಕೂದಲನ್ನು ಎಳೆದು ಹಿಂಸೆ ಮಾಡಿದ್ದಲ್ಲದೆ, ಆಕೆಯ ತಲೆಯನ್ನು ನೆಲಕ್ಕೆ ಬಡಿದಿದ್ದಾಳೆ. ಆಕೆಯ ಮೇಲೆ ಹಿಂಸೆ ಅತಿಯಾಗುತ್ತಿದ್ದಂತೆ ಮಗು ನಿರಂತರವಾಗಿ ಅಳುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.