Shramika Sanjeevini: ಕಾರ್ಮಿಕರ ಮನೆ ಬಾಗಿಲಿಗೇ ಬಂತು ಆರೋಗ್ಯ ಸೇವೆ

ಹೊಟ್ಟೆ ಪಾಡಿಗಾಗಿ ಪ್ರತಿನಿತ್ಯ ಕಷ್ಟಪಟ್ಟು ಶ್ರಮಿಸುವ ಕಾರ್ಮಿಕ ವರ್ಗ‌‌ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗದ ಅಭಿವೃದ್ಧಿಗಾಗಿ ಹಾಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಶ್ರಮಿಕ ಸಂಜೀವಿನಿ ಅನ್ನೋ ಯೋಜನೆಯನ್ನ ರೂಪಿಸಿ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ಮೊಬೈಲ್ ಕ್ಲಿನಿಕ್ ಮೂಲಕ ಕಾರ್ಮಿಕರ ಮನೆ ಬಾಗಿಲಿಗೇ ಬಂದು ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕಾರ್ಮಿಕರಿಂದ ಈ ಸೇವೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

First Published Feb 17, 2022, 4:01 PM IST | Last Updated Feb 17, 2022, 4:01 PM IST

ಒಂದೆಡೆ ಗ್ರಾಮೀಣ ಪ್ರದೇಶಕ್ಕೆ ಆಗಮಿಸಿದ ಸುಸಜ್ಜಿತ ಅಂಬ್ಯುಲೆನ್ಸ್(Ambulance). ಇನ್ನೊಂದೆಡೆ ಆರೋಗ್ಯ ತಪಾಸಣೆಗೆ ಸಾಲುಗಟ್ಟಿ ನಿಂತ ಪುರುಷರು ಮತ್ತು ಮಹಿಳಾ ಕಾರ್ಮಿಕರು. ಮತ್ತೊಂದೆಡೆ ಅಂಬ್ಯುಲೆನ್ಸ್‌ನಲ್ಲೇ ಈಸಿಜಿಯಂತಹ ಅತ್ಯಾಧುನಿಕ ತಪಾಸಣೆಯನ್ನು ಕೈಗೊಳ್ಳುತ್ತಿರುವ ವೈದ್ಯ ಸಿಬ್ಬಂದಿ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಾವಳ್ಳಿ(Mavalli) ಗ್ರಾಮದಲ್ಲಿ. ರಾಜ್ಯ ಸರ್ಕಾರ(State Government)ದ ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷಿ ಶ್ರಮಿಕ ಸಂಜೀವಿನಿ ಯೋಜನೆಯಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಅಂಬ್ಯುಲೆನ್ಸ್‌ಗಳನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಒದಗಿಸಲಾಗಿದ್ದು, ಇದೀಗ ಸೇವೆಯನ್ನು ಪ್ರಾರಂಭಿಸಿವೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಸ್ವಾಸ್ಥ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಶ್ರಮಿಕ ಸಂಜೀವಿನಿ ಯೋಜನೆಯನ್ನು ರೂಪಿಸಲಾಗಿದೆ. ನೋಂದಾಯಿತ ಕಾರ್ಮಿಕರು ಇರೋವಲ್ಲಿಗೆ ತೆರಳಿ ಅವರ ಆರೋಗ್ಯ ತಪಾಸಣೆ ಜತೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿರುವ ಈ ಸಂಚಾರಿ ಕ್ಲಿನಿಕ್‌(Mobile clinic)ಗಳು ವಾರದಲ್ಲಿ ಆರು ದಿನಗಳ ಕಾಲ ನಿಗದಿತ ಅವಧಿಯಲ್ಲಿ ದಿನಕ್ಕೆರಡು ಗ್ರಾಮಗಳಲ್ಲಿ ಓಡಾಟ ನಡೆಸುತ್ತಿದೆ. ಪ್ರಯೋಗಾಲಯ ಸಲಕರಣೆಗಳು, ಈಸಿಜಿ ಸೇರಿದಂತೆ ಅವಶ್ಯಕ ವೈದ್ಯಕೀಯ ಪರಿಕರಗಳನ್ನು ಹೊಂದಿರುವ ಈ ಸಂಚಾರಿ ಕ್ಲಿನಿಕ್‌ ಅನ್ನು ಶಿರಸಿಯ ಸ್ಕೋಡ್‌ವೇಸ್ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಕಾರ್ಮಿಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. 

Love And Heart: ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ..!

 ಸರ್ಕಾರದ ಈ ನೂತನ ಯೋಜನೆಗೆ ಸಂತಸ ವ್ಯಕ್ತಪಡಿಸಿರುವ ಕಾರ್ಮಿಕರು, ಅಂಬ್ಯುಲೆನ್ಸ್‌ ಸೇವೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆ ಸದ್ಯ ಬೆಳಗಾವಿ, ಧಾರವಾಡ ಹಾಗೂ ಉತ್ತರಕನ್ನಡ ಜಿಲ್ಲೆಗಳ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪ್ರಾರಂಭಿಸಲಾಗಿದೆ. ಆದರೆ, ಈ ಸೌಲಭ್ಯವನ್ನು ಇಡೀ ರಾಜ್ಯಕ್ಕೆ ಮತ್ತು ಎಲ್ಲಾ ವಿಧದ ಕಾರ್ಮಿಕರಿಗೂ ವಿಸ್ತರಿಸಬೇಕು ಎಂಬ ಆಗ್ರಹ ಕಾರ್ಮಿಕರಿಂದ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್(Shivaram Hebbar) ಶ್ರಮಿಕ ಸಂಜೀವಿನಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಇಲಾಖೆ ಸನ್ನದ್ಧವಾಗಿದೆ. ಈ ಯೋಜನೆ ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯಿಂದ ಅನುಷ್ಠಾನಗೊಂಡಿರುವುದರಿಂದ ಅನುದಾನವನ್ನು ಕಟ್ಟಡ ಕಾರ್ಮಿಕರಿಗೇ ಬಳಕೆ ಮಾಡಬೇಕಾಗಿದೆ. ಇತರೆ ಅಸಂಘಟಿತ ಕಾರ್ಮಿಕರಿಗೆ ಬೇರೆ ನಿಧಿಯಿಂದ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. 

Model Mammikka: ಕೂಲಿ ಮಾಡುತ್ತಿದ್ದ ಅರವತ್ತರ ಮಮ್ಮಿಕ್ಕಾ ಈಗ ಸೂಪರ್‌ ಮಾಡೆಲ್!

ಒಟ್ಟಿನಲ್ಲಿ ಕಟ್ಟಡ ಕಾರ್ಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಮಿಕ ಇಲಾಖೆಯ ಶ್ರಮಿಕ ಸಂಜೀವಿನಿ ಶ್ರಮಿಕರ ಪಾಲಿಗೆ ಅಕ್ಷರಶಃ ಸಂಜೀವಿನಿಯೇ ಆಗಿದೆ. ಆದರೆ, ಈ ಯೋಜನೆಯನ್ನು ಮುಂಬರುವ ದಿನಗಳಲ್ಲಾದರೂ ಇಡೀ ರಾಜ್ಯಕ್ಕೆ ವಿಸ್ತರಿಸುವ ಮೂಲಕ ಎಲ್ಲಾ ಕಾರ್ಮಿಕರಿಗೂ ಈ ಆರೋಗ್ಯ ಸೇವೆ ದೊರಕುವಂತಾಗಬೇಕಿದೆ.

Video Top Stories