ಹರಿಹರಪುರ ಮಠದಲ್ಲಿ ಐದು ಲಕ್ಷ ಪುಸ್ತಕಗಳ ಮೇಲೆ ನಿಂತ ಆಂಜನೇಯ!

ಅದು ದಕ್ಷಯಜ್ಞ ನಡೆದಿದ್ದ ಸ್ಥಳ. ದಕ್ಷಾಶ್ರಮ ಎಂದು ಸ್ಕಂದ ಪುರಾಣದಲ್ಲೇ ಉಲ್ಲೇಖವಿದೆ. ಯಜ್ಞ ಕುಂಡದಿಂದ ಶಿವ ಪ್ರತ್ಯಕ್ಷನಾಗಿ ಅನುಗ್ರಹಿಸಿದ್ದ ಅಂಥ ಪುಣ್ಯಭೂಮಿಯಲ್ಲೀಗ ವಾಯುಪುತ್ರ ನೆಲೆ ನಿಂತಿದ್ದಾನೆ. 27 ಅಡಿ ಎತ್ತರಕ್ಕೆ ಕೈಮುಗಿದು, ಮಂಡಿಯೂರಿ ಕೂತಿರೋ ಅವನ ನೋಡಲಿಕ್ಕೆ ಎರಡು ಕಣ್ಣುಗಳೇ ಸಾಲದು. ಅಲ್ಲಿ ನೆಲೆ ನಿಂತಿರೋ ಆಂಜನೇಯನ ಇತಿಹಾಸ ಕೂಡ ಅಷ್ಟೇ ರೋಚಕವಾಗಿದೆ. ಈ ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ ಅನ್ನೋದು ಗಮನಾರ್ಹ. 

First Published May 10, 2022, 10:58 AM IST | Last Updated May 10, 2022, 10:58 AM IST

ಈ ವಾಯುಪುತ್ರನನ್ನೊಮ್ಮೆ ನೋಡಿ. ಚಿಕ್ಕಮಗಳೂರು(Chikmagaluru) ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ(Hariharapura) ಮಠದ ಆವರಣದಲ್ಲಿ ವಿರಾಜಮಾನವಾಗಿ ನಿಂತಿದ್ದಾನೆ. ಎದ್ದು ಬರೋದಕ್ಕೆ ಸಿದ್ಧನಾದಂತೆ ನಿಂತಿರೋ 27 ಅಡಿಯ ಇವನನ್ನ ನೋಡೋದೇ ಆನಂದ. ಆದ್ರೆ, ಈತ ನಿಂತಿರೋದು 5 ಲಕ್ಷ ಪುಸ್ತಕಗಳ(books) ಮೇಲೆ ಅನ್ನೋದು ಮತ್ತೊಂದು ಗಮನಾರ್ಹ ಸಂಗತಿ. ಈ ಆಂಜನೇಯ ಪಾದದಡಿ ಜೈ... ಜೈ... ಲಕ್ಷ್ಮಿ ನರಸಿಂಹ, ವಜ್ರ ನರಸಿಂಹ ಎಂದು ಬರೆದಿರುವ ನರಸಿಂಹನ ಮಂತ್ರದ ಐದು ಲಕ್ಷದ ಪುಸ್ತಕಗಳಿವೆ. ಅಗಸ್ತ್ಯ ಮಹರ್ಷಿಗಳು ದಕ್ಞಯಜ್ಞ (Daksha yajna) ನಡೆಸಿ ಇಲ್ಲಿ ಲಕ್ಷ್ಮಿ ನರಸಿಂಹರ ದರ್ಶನ ಪಡೆದಿದ್ದರು. ಲಕ್ಷ್ಮಿ ನರಸಿಂಹ ಸಾಲಿಗ್ರಾಮ ಇಂದಿಗೂ ಅದೇ ಪರಂಪರೆಯಲ್ಲಿ ಪೂಜೆ ಆಗ್ತಿದೆ. ಶಂಕರ ಭಗವತ್ಪಾದರು ಇಲ್ಲಿ ಶ್ರೀಚಕ್ರ ಯಂತ್ರೋದ್ಧಾರ ಮಾಡಿ ಶಾರದಾ ಪರಮೇಶ್ವರಿಯನ್ನ ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸ್ಥಳ ಐತಿಹಾಸಿಕ ಹಿನ್ನೆಲೆ ಒಳಗೊಂಡಿದೆ. ಇಂತಹಾ ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ 27 ಅಡಿಯ ವಾಯುಪುತ್ರ ಐದು ಲಕ್ಷ ಪುಸ್ತಕಗಳ ಮೇಲೆ ನೆಲೆ ನಿಂತಿದ್ದಾನೆ. 

ಮಠದಲ್ಲಿ ನಡೆದ ಕುಂಭಾಭಿಷೇಕ ನಿಮಿತ್ತ ಭಕ್ತರು ಬರೆದು ಕಳುಹಿಸಿದ ಐದು ಲಕ್ಷ ಪುಸ್ತಕಗಳನ್ನ ಈ ಮೂರ್ತಿಯ ಅಡಿ ಪ್ರತಿಷ್ಠಾಪಿಸಲಾಗಿದೆ. ಪಂಚದರ್ಬೆಗಳ ಮೇಲೆ ಅರಿಶಿನ, ಕುಂಕುಮ, ಗಂಧ, ವಿಭೂತಿ, ಬಿಲ್ವಪತ್ರೆ ಹಾಗೂ ತುಳಸಿ ಹಾಕಿ ಲೇಯರ್ ಮಾಡಿ ಐದು ಲಕ್ಷ ಪುಸ್ತಕಗಳನ್ನ ಜೋಡಿಸಲಾಗಿದೆ. ಹರಿಹರಪುಠ ಮಠದ ಸಚ್ಚಿದಾನಂದ ಶ್ರೀಗಳೇ ಐದು ಲಕ್ಷ ಪುಸ್ತಕಗಳನ್ನ ಜೋಡಿಸಿ ಇಟ್ಟಿದ್ದಾರೆ. ಕುಂಭಾಭಿಷೇಕದ ನಿಮಿತ್ತ ಮಠದಿಂದಲೇ ಇಂಗ್ಲಿಷ್ ಒಂದನ್ನು ಬಿಟ್ಟು ಕನ್ನಡ, ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಮರಾಠಿ, ಬೆಂಗಾಳಿ ಸೇರಿದಂತೆ ಎಲ್ಲ ಭಾಷೆಯಲ್ಲೂ ಪುಸ್ತಕಗಳನ್ನ ನೀಡಲಾಗಿತ್ತು. ದೇಶದ ಎಲ್ಲ ರಾಜ್ಯದ ಭಕ್ತರು ಜೈ... ಜೈ... ಲಕ್ಷ್ಮಿ ನರಸಿಂಹ, ವಜ್ರ ನರಸಿಂಹ ಎಂದು ಬರೆದು ಕಳುಹಿಸಿದ್ದರು. ದೇಶವಷ್ಟೇ ಅಲ್ಲದೆ ಅಮೆರಿಕಾ, ರಷ್ಯಾ, ಇಂಗ್ಲೆಂಡ್, ಮಲೇಷ್ಯಾ, ದುಬೈ ಹಾಗೂ ಸೌದಿ ಅರೇಬಿಯಾದಿಂದಲೂ ಭಕ್ತರು ಪುಸ್ತಕವನ್ನ ಬರೆದು ಕಳುಹಿಸಿದ್ದಾರೆ. 

ಇಂದು ಜಾನಕಿ ಜಯಂತಿ, ವ್ರತಾಚರಣೆ, ಪೂಜಾ ವಿಧಿಗಳೇನು?

ಒಟ್ಟಾರೆ, ಈ ಮಣ್ಣಲ್ಲಿ ಅಸಂಖ್ಯಾತ ದೇವಾಲಯಗಳಿವೆ. ಒಂದೊಂದು ದೇವಾಲಯಗಳದ್ದು ಒಂದೊಂದು ಇತಿಹಾಸ. ಒಂದೊಂದು ದೇವರದ್ದು ಒಂದೊಂದು ರೋಚಕ ಕತೆ. ಅಂತಹಾ ವಿಭಿನ್ನ ಕಥೆಗೆ ಈ ಆಂಜನೇಯನೂ ಸೇರಿಕೊಳ್ಳುತ್ತಾನೆ. ಹರಿಹರಪುರ ಮಠ ದೇವಸ್ಥಾನವಾದರೂ ಈ ದೇವಾಲಯದ ಆವರಣದಲ್ಲಿರುವ ಆಂಜನೇಯ ಪ್ರವಾಸಿ ಮೂರ್ತಿಯಾಗಿದ್ದಾನೆ. ಇಲ್ಲಿಗೆ ಬಂದ ಭಕ್ತರು ದೇವರ ಆಶೀರ್ವಾದ ಪಡೆದು ಈ ಪ್ರವಾಸಿ ಆಕರ್ಷಕ ಮೂರ್ತಿಯ ದರ್ಶನ ಪಡೆದು ಪುನೀತರಾಗ್ತಿದ್ದಾರೆ.

Video Top Stories