ಶಿಕ್ಷಕರ ಕಿರುಕುಳ ಆರೋಪ, ವಿದ್ಯಾರ್ಥಿನಿ ಆತ್ಮಹತ್ಯೆಗೆ ಭಾರಿ ಪ್ರತಿಭಟನೆ, 13 ಬಸ್‌ಗೆ ಬೆಂಕಿ!
ಡೆತ್‌ನೋಟ್‌ನಲ್ಲಿ ಶಿಕ್ಷಕರ ವಿರುದ್ಧ ಆರೋಪ ಮಾಡಿರುವ ವಿದ್ಯಾರ್ಥಿನಿ, 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಭಾರಿ ಪ್ರತಿಭಟನೆ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದ ಶಾಲೆ ವಿರುದ್ಧ ಆಕ್ರೋಶ
ಚೆನ್ನೈ(ಜು.17): ಶಾಲಾ ಕಟ್ಟದ ಮೇಲೆ ದಾಳಿ, ಕಿಟಕಿ ಗಾಜು, ಬಾಗಿಲು ಪುಡಿ ಪುಡಿ, 13 ಶಾಲಾ ಬಸ್ ಹಾಗೂ 3 ಪೊಲೀಸ್ ವಾಹನಕ್ಕೆ ಬೆಂಕಿ. ಹಿರಿಯ ಪೊಲೀಸ್ ಅಧಿಕಾರಿ ಸೇರಿ ಹಲವರಿಗ ಗಂಭೀರ ಗಾಯ. ಇದು ತಮಿಳುನಾಡಿನ ಕಲ್ಲಾಕುರುಚಿ ಜಿಲ್ಲೆಯ ಶಾಲೆಯಲ್ಲಿ ನಡೆದ ಪ್ರತಿಭಟನೆ. ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಬುಧವಾರ( ಜು.14) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ ಡೆತ್ ನೋಟ್‌ನಲ್ಲಿ ಇಬ್ಬರು ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಆದರೆ ಇದುವರೆಗೂ ಶಾಲಾ ಆಡಳಿತ ಮಂಡಳಿ ಶಿಕ್ಷರ ವಿರುದ್ದ ಕ್ರಮಕೈಗೊಂಡಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 2,000ಕ್ಕೂ ಹೆಚ್ಚು ಮಂದಿ ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಶಾಲಾ ಕಟ್ಟದ ಮೇಲೆ ದಾಳಿ ನಡೆಸಿದ್ದಾರೆ. ಭಾನುವಾರ ರಜಾದಿನವಾದ ಕಾರಣ ಶಾಲಾ ಆವರಣದಲ್ಲಿ ನಿಲ್ಲಿಸಿದ್ದ 13 ಬಸ್‌ಗಳನ್ನು ಜಖಂಗೊಳಿಸಿ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಟ್ರಾಕ್ಟರ್ ಮೂಲಕ ವಾಹನ ಜಖಂಗೊಳಿಸಿ ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.