ಪ್ರೀತಿಸಲು ನಿರಾಕರಣೆ: ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರ ಕೊಲೆ ಮಾಡಿದ ಆರೋಪಿ ವಿಘ್ನೇಶ್!

ಪ್ರೀತಿಗೆ ನಿರಾಕರಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಚಾಕುವಿನಿಂದ ಇರಿದು ಕಿಡಿಗೇಡಿಯೊಬ್ಬ ಹತ್ಯೆಗೈದು ಪರಾರಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.17): ಪ್ರೀತಿಗೆ ನಿರಾಕರಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಚಾಕುವಿನಿಂದ ಇರಿದು ಕಿಡಿಗೇಡಿಯೊಬ್ಬ ಹತ್ಯೆಗೈದು ಪರಾರಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಸ್ವತಂತ್ರಪಾಳ್ಯದ ಯಾಮಿನಿ ಪ್ರಿಯಾ (20) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತಳ ನೆರೆ ಮನೆಯ ನಿವಾಸಿ ವಿಘ್ನೇಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಾಲೇಜು ಮುಗಿಸಿ ಮನೆಗೆ ಮರಳುವಾಗ ಮಂತ್ರಿ ಮಾಲ್ ಸಮೀಪ ರೈಲ್ವೆ ಹಳಿಗಳ ಬಳಿ ಪ್ರಿಯಾಳಿಗೆ ಚಾಕುವಿನಿಂದ ಇರಿದು ಆರೋಪಿ ಕೊಂದಿದ್ದಾನೆ. ಕುಟುಂಬದ ಜತೆ ಸ್ವತಂತ್ರಪಾಳ್ಯದಲ್ಲಿ ನೆಲೆಸಿದ್ದ ಪ್ರಿಯಾ, ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮ್‌ ಓದುತ್ತಿದ್ದಳು.

ಪ್ರತಿ ದಿನ ನಡೆದುಕೊಂಡೇ ಕಾಲೇಜಿಗೆ ಹೋಗಿ ಆಕೆ ಬರುತ್ತಿದ್ದಳು. ಹಲವು ದಿನಗಳಿಂದ ಆಕೆಗೆ ಪ್ರೀತಿಸುವಂತೆ ನೆರೆಮನೆಯ ವಿಘ್ನೇಶ್ ಹಿಂದೆ ಬಿದ್ದಿದ್ದ. ಆದರೆ ಆತನ ಪ್ರಸ್ತಾಪಕ್ಕೆ ಪ್ರಿಯಾ ನಿರಾಕರಿಸಿದ್ದಳು. ಇದರಿಂದ ಕೆರಳಿದ ಆರೋಪಿ, ಕಾಲೇಜು ಮುಗಿಸಿ ಮಧ್ಯಾಹ್ನ ಮನೆಗೆ ಮರಳುತ್ತಿದ್ದ ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ರಕ್ತದ ಮಡುವಿನಲ್ಲಿ ವಿದ್ಯಾರ್ಥಿನಿ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video