
ಅತ್ತೆಯನ್ನ ಪೀಸ್ ಪೀಸ್ ಮಾಡಿದ ಡಾಕ್ಟರ್ ಅಳಿಯ! ಮರ್ಡರ್ ಸುಳಿವು ಕೊಟ್ಟಿದ್ದು ಅವನದ್ದೇ ಕಾರು!
ತನ್ನ ಅತ್ತೆಯ ನಡವಳಿಕೆ ಬಗ್ಗೆ ಅನುಮಾನಗೊಂಡ ಅಳಿಯನೊಬ್ಬ ಆಕೆಯನ್ನು ಕೊಂದು ಶವವನ್ನು ತುಂಡರಿಸಿ ರಸ್ತೆಯಲ್ಲಿ ಎಸೆದ ಘಟನೆ ತುಮಕೂರಿನಲ್ಲಿ ನಡೆದಿದೆ. ಪೊಲೀಸರು ಕಾರನ್ನು ಹಿಂಬಾಲಿಸಿ ಹಂತಕರನ್ನು ಬಂಧಿಸಿದ್ದಾರೆ.
ತುಮಕೂರು (ಆ.12): ತನ್ನ ಅತ್ತೆಯ ನಡವಳಿಕೆ ಬಗ್ಗೆ ಅನುಮಾನಗೊಂಡು ವೈದ್ಯನಾದ ಅಳಿಯನೊಬ್ಬ ಆಕೆಯನ್ನು ಕೊಂದು, ಶವವನ್ನು ತುಂಡುತುಂಡಾಗಿ ಮಾಡಿ ರಸ್ತೆಯಲ್ಲಿ ಎಸೆದಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಒಂದು ಕಾರನ್ನು ಹಿಂಬಾಲಿಸಿ ಹಂತಕನನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಘಟನೆ ಹಿನ್ನೆಲೆ:
ವೃತ್ತಿಯಲ್ಲಿ ದಂತವೈದ್ಯನಾಗಿರುವ ಆರೋಪಿಗೆ ಇದು ಎರಡನೇ ಮದುವೆ. ಮದುವೆಯ ನಂತರ ಆತನಿಗೆ ತನ್ನ ಅತ್ತೆಯ ನಡತೆಯ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ. ಅತ್ತೆಯ ಕಾರಣದಿಂದ ತನ್ನ ಪತ್ನಿಯೂ ಕೆಟ್ಟ ಹಾದಿಯಲ್ಲಿ ನಡೆಯುತ್ತಿದ್ದಾಳೆ ಎಂದು ಅಳಿಯ ನಂಬಿದ್ದ. ಇದರಿಂದ ಕೋಪಗೊಂಡು, ಅತ್ತೆಯನ್ನು ಕೊಂದುಬಿಟ್ಟರೆ ತನ್ನ ಪತ್ನಿ ಸರಿಯಾಗುತ್ತಾಳೆ ಎಂದು ಯೋಚಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ.
ಕೃತ್ಯ ಎಸಗಿದ್ದು ಹೇಗೆ?
ಅಳಿಯ ತನ್ನ ಈ ಕ್ರೂರ ಯೋಜನೆಗೆ ಇಬ್ಬರು ಸ್ನೇಹಿತರ ಸಹಾಯ ಪಡೆದಿದ್ದಾನೆ. ಮಗಳನ್ನು ನೋಡಲು ಬಂದಿದ್ದ ಅತ್ತೆ ಲಕ್ಷ್ಮೀ ದೇವಮ್ಮ ಅವರನ್ನು, "ತುಮಕೂರು ಬಸ್ ಸ್ಟ್ಯಾಂಡ್‌ಗೆ ಡ್ರಾಪ್ ಮಾಡುತ್ತೇನೆ" ಎಂದು ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ, ಪೂರ್ವನಿಯೋಜಿತವಾಗಿ ಆಕೆಯ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಶವವನ್ನು ತುಂಡುತುಂಡಾಗಿ ಮಾಡಿ ವಿಲೇವಾರಿ ಮಾಡಲು ಯತ್ನಿಸಿದ್ದಾರೆ. ದೇಹದ ಭಾಗಗಳನ್ನು ಕೆರೆಗೆ ಎಸೆಯುವ ಯೋಜನೆ ವಿಫಲವಾದಾಗ, ಭಯದಿಂದ ರಸ್ತೆಯ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ.
ಕಾರು ನೀಡಿದ ಸುಳಿವು:
ಬೆಳಗ್ಗೆ ರಸ್ತೆಯಲ್ಲಿ ಮನುಷ್ಯನ ದೇಹದ ತುಂಡುಗಳು ಪತ್ತೆಯಾದಾಗ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಯಾವುದೇ ಸುಳಿವು ಸಿಗುತ್ತಿರಲಿಲ್ಲ. ಆದರೆ, ಕೊಲೆಗೆ ಬಳಸಿದ ಕಾರೇ ಹಂತಕರನ್ನು ಪತ್ತೆಹಚ್ಚಲು ಪೊಲೀಸರಿಗೆ ಪ್ರಮುಖ ಸುಳಿವು ನೀಡಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಓಡಾಡಿದ ಕಾರು ಪತ್ತೆಯಾಗಿದೆ. ಅದರ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಕೊಲೆ ಆರೋಪಿ ಮತ್ತು ಅವನ ಸಹಚರರನ್ನು ಬಂಧಿಸಿದ್ದಾರೆ. ಅತ್ತೆ ಮೇಲಿನ ಅನುಮಾನದಿಂದ ಇಂತಹ ಘೋರ ಕೃತ್ಯ ಎಸಗಿದ್ದು, ಈ ಕೃತ್ಯವನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.