
ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
ಏಷ್ಯಾಕಪ್ ಟ್ರೋಫಿ ಹಸ್ತಾಂತರ ವಿವಾದ ಮುಂದುವರೆದಿದ್ದು, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಬಿಸಿಸಿಐ ಇದೀಗ ನಖ್ವಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದು, ಶ್ರೀಲಂಕಾದ ಬೆಂಬಲ ನಿರೀಕ್ಷಿಸುತ್ತಿದೆ.
ಏಷ್ಯಾಕಪ್ ಟೂರ್ನಿ ಮುಗಿದು ವಾರವಾಗುತ್ತಾ ಬಂದ್ರೂ ಇನ್ನೂ ಟೂರ್ನಿಯ ಕುರಿತಾದ ಕಾಂಟ್ರೋವರ್ಸಿಗಳು ನಿಂತಿಲ್ಲ. ಟ್ರೋಫಿ ಹಸ್ತಾಂತರದ ಹೈಡ್ರಾಮ ಕಂಟಿನ್ಯೂ ಆಗಿದ್ದು, ಪಾಕ್ ಸಚಿವ ಹಾಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಮೊಂಡು ವಾದ ಮುಂದುವರೆಸಿದ್ದಾರೆ. ಭಾರತಕ್ಕೆ ಟ್ರೋಫಿ ಬೇಕಿದ್ರೆ ನನ್ನಿಂದಲೇ ಪಡೆದುಕೊಳ್ಳಲಿ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ನಖ್ವಿ, ಎಸಿಸಿ ಅಧ್ಯಕ್ಷನಾಗಿ ನಾನು ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಂದು ಸಿದ್ದವಾಗಿದ್ದೆ, ಈಗಲೂ ರೆಡಿಯಿದ್ದೇನೆ. ಅವರಿಗೆ ನಿಜವಾಗಿಯೂ ಟ್ರೋಫಿ ಬೇಕಿದ್ರೆ ಎಸಿಸಿ ಕಚೇರಿಗೆ ಬಂದು ನನ್ನಿಂದ ಪಡೆದುಕೊಳ್ಳಲಿ, ಒಂದಂತೂ ಸ್ಪಷ್ಟ ನಾನೇನು ತಪ್ಪು ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ತನ್ನ ಹಠಮಾರಿ ಧೋರಣೆ ಮುಂದುವರೆಸಿರುವ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಬಿಸಿ ಮುಟ್ಟಿಸಲು ಇದೀಗ ಬಿಸಿಸಿಐ ಮುಂದಾಗಿದೆ. ಇದೀಗ ಬಿಸಿಸಿಐ ಎಸಿಸಿ ಅಧ್ಯಕ್ಷ ನಖ್ವಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ನಖ್ವಿ ಪದಚ್ಯುತಿಗೆ ಮುಂದಾಗಿರುವ ಬಿಸಿಸಿಐಗೆ ಇತರ ಏಷ್ಯಾದ ರಾಷ್ಟ್ರಗಳ ಬೆಂಬಲ ಬೇಕಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಭಾರತದ ಅವಿಶ್ವಾಸ ನಿರ್ಣಯಕ್ಕೆ ಶ್ರೀಲಂಕ ಮಂಡಳಿ ಬೆಂಬಲಕ್ಕೆ ಬರಲಿದೆ ಎನ್ನಲಾಗಿದೆ. ಆದರೆ ಪಾಕಿಸ್ತಾನ ಪರ ಬಾಂಗ್ಲಾದೇಶ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.