
Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
ಸೆಪ್ಟೆಂಬರ್ 9-28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ 17ನೇ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. 8 ತಂಡಗಳು ಎರಡು ಗುಂಪುಗಳಲ್ಲಿ ಸ್ಪರ್ಧಿಸಲಿದ್ದು, ಭಾರತವು ಪಾಕಿಸ್ತಾನ, ಯುಎಇ ಮತ್ತು ಓಮಾನ್ ಜೊತೆಗೆ 'ಎ' ಗುಂಪಿನಲ್ಲಿದೆ. ಟೂರ್ನಿಯಲ್ಲಿ ಭಾರತ 9ನೇ ಟ್ರೋಫಿ ಗೆಲ್ಲುವ ಫೆವರಿಟ್ ತಂಡವಾಗಿದೆ.
ಬೆಂಗಳೂರು: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಇದೇ ಸೆಪ್ಟೆಂಬರ್ 9-28ರ ವರೆಗೆ ನಡೆಯಲಿದೆ. ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ರೂ ತಾಂತ್ರಿಕ ಕಾರಣಗಳಿಂದ ಯುಎಇನ ದುಬೈ& ಅಬುದಾಬಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದೆ.
2023ರ ಏಷ್ಯಾಕಪ್ ಟೂರ್ನಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಆಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಈ ಬಾರಿ ಏಷ್ಯಾದ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಇನ್ನು ಓಮಾನ್ ಕ್ರಿಕೆಟ್ ತಂಡವು ಇದೇ ಮೊದಲ ಸಲ ಏಷ್ಯಾಕಪ್ ಆಡಲು ಅರ್ಹತೆ ಪಡೆದಿದೆ. 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ತಂಡಗಳು ಸ್ಥಾನ ಪಡೆದಿವೆ. ಇನ್ನು ಬಿ ಗುಂಪಿನಲ್ಲಿ ಶ್ರೀಲಂಕಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಹಾಂಕಾಂಗ್ ತಂಡಗಳು ಸ್ಥಾನ ಪಡೆದಿವೆ.
ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿವೆ. ಇನ್ನು ಸೂಪರ್ 4 ಹಂತದಲ್ಲಿ ಟಾಪ್ 2 ಸ್ಥಾನ ಪಡೆಯುವ ಎರಡು ತಂಡಗಳು ಸೆಪ್ಟೆಂಬರ್ 28ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ 8 ಬಾರಿ ಏಷ್ಯಾಕಪ್ ಜಯಿಸಿದ್ದು, ಇದೀಗ 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದ್ದು, ಅರಬ್ಬರ ನಾಡಲ್ಲಿ ಭಾರತ ಮತ್ತೊಮ್ಮೆ ಟ್ರೋಫಿ ಗೆಲ್ಲಲಿ ಅನ್ನೋದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.