Asianet Suvarna News Asianet Suvarna News

ಆಪರೇಷನ್ ಟೈಗರ್: 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ

ಹುಲಿಗೆ ಮತ್ತೊಬ್ಬ ರೈತ ಬಲಿ| ಗೋಪಾಲಸ್ವಾಮಿ ಬೆಟ್ಟದ ಕಾಡಂಚಿನಲ್ಲಿ ನಡೆದ ಘಟನೆ| ಚೌಡಹಳ್ಳಿಯಲ್ಲಿ ದನ ಮೇಯಿಸುತ್ತಿದ್ದಾಗ ರೈತನ ಮೇಲರಿಗದ ಹುಲಿ| ಸೆ.1ರಂದು ಇದೇ ಹಳ್ಳಿಯಲ್ಲಿ ಮತ್ತೊಬ್ಬ ರೈತ ಹುಲಿ ದಾಳಿಗೆ ಬಲಿಯಾಗಿದ್ದ| ಸ್ಥಳಿಯರ ಆಕ್ರೋಶ| 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ ನೀಡಿದ ಅರಣ್ಯಾಧಿಕಾರಿಗಳು| ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು ಅಧಿಕಾರಿಗಳ ಭರವಸೆ ಮಾತು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯದಂಚಿನ ಚೌಡಹಳ್ಳಿಯ ರೈತನೊಬ್ಬನನ್ನು ಹುಲಿ ಕೊಂದು ತಿಂದ ಘಟನೆ ಮಾಸುವ ಮುನ್ನವೇ ಈಗ ಅದೇ ಗ್ರಾಮದ ಮತ್ತೊಬ್ಬ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಮಂಗಳವಾರ ನಡೆದಿದೆ. ಒಂದೇ ಗ್ರಾಮದ ಇಬ್ಬರು ರೈತರು ಹುಲಿ ದಾಳಿಗೆ ಬಲಿಯಾಗಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ. ‘ನರಹಂತಕ’ ಹುಲಿ ಸೆರೆಗೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚೌಡಹಳ್ಳಿಯ ಶಿವಲಿಂಗಪ್ಪ (55) ಮೃತ ರೈತ. ಚೌಡಹಳ್ಳಿಯ ಬಂಡೀಪುರ ಹುಲಿ ಯೋಜನೆಗೆ ಸೇರಿದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಮಹಾಲಿಂಗಶೆಟ್ಟರ ಜಮೀನಿನ ಬಳಿಕ ದನ ಮೇಯುಸುತ್ತಿದ್ದಾಗ ಹುಲಿ ದಾಳಿ ಮಾಡಿದೆ. ತಕ್ಷಣ ಸ್ಥಳದಲ್ಲಿದ್ದ ಕೆಲವರು ಕಲ್ಲೆಸೆದು ಓಡಿಸಲು ಯತ್ನಿಸಿದಾಗ ರೈತನನ್ನು ಪೊದೆಯತ್ತ ಎಳೆದೊಯ್ದು ಬಳಿಕ ಪರಾರಿಯಾಗಿದೆ. ಗ್ರಾಮದಲ್ಲೀಗ ಆತಂಕ ಆವರಿಸಿದೆ. ಸೆ.1ರಂದು ಚೌಡಹಳ್ಳಿಯ ಶಿವಮಾದಯ್ಯ ಅವರನ್ನು ಹುಲಿ ಕೊಂದು ತಿಂದಿತ್ತು. ಈಗ ಇದೇ ಗ್ರಾಮದ ಮತ್ತೊಬ್ಬ ರೈತ ಬಲಿಯಾಗಿದ್ದಾರೆ.

ಸ್ಥಳೀಯರ ಆಕ್ರೋಶ: ಸುದ್ದಿ ತಿಳಿಯುತ್ತಲೇ ಚೌಡಹಳ್ಳಿ, ಹುಂಡೀಪುರ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಾಟಕ ಬೇಡ, ಶೀಘ್ರ ಅದರ ಹತ್ಯೆಗೆ ಆದೇಶ ನೀಡಿ ಎಂದು ಎಸಿಎಫ್‌ ರವಿಕುಮಾರ್‌ ರನ್ನು ಆಗ್ರಹಿಸಿದರು. ಇದ್ಕಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು 48 ಗಂಟೆಯೊಳಗಾಗಿ ಹುಲಿಯನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಸಾಧ್ಯವಾಗದಿದ್ದರೆ ಶೂಟೌಟ್ ಮಾಡುತ್ತೇವೆಂಬ ಭರವಸೆ ನೀಡಿದ್ದಾರೆ.

Video Top Stories