ಹಿರಿಯ ಕನ್ನಡ ನಟಿ ಜಯಲಕ್ಷ್ಮೀ ಪಾಟೀಲ್ ಕಳೆದ ಆರು ತಿಂಗಳಿಂದ ಧಾರಾವಾಹಿಗಳಿಂದ ದೂರ ಉಳಿದಿದ್ದಾರೆ. ತೀವ್ರ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ದಶಕಗಳ ಕಾಲ ರಂಗಭೂಮಿ, ಕಿರುತೆರೆ, ಸಿನಿಮಾ ಹಾಗೂ ಆಕಾಶವಾಣಿ ಕ್ಷೇತ್ರಗಳಲ್ಲಿ ಅಭಿನಯಿಸುತ್ತಾ ಪ್ರೇಕ್ಷಕರನ್ನು ರಂಜಿಸಿರುವ ಹಿರಿಯ ಕಲಾವಿದೆ ಜಯಲಕ್ಷ್ಮೀ ಪಾಟೀಲ್, ಸದ್ಯ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ಅವರು, ತಮ್ಮ ಆರೋಗ್ಯದ ಸ್ಥಿತಿ ಹಾಗೂ ಬದುಕಿನ ಹೋರಾಟದ ಬಗ್ಗೆ ಸ್ವತಃ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತುಗಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡಿಗರ ಮನೆಮಾತಾಗಿದ್ದ ಹಿರಿಯ ಕಲಾವಿದೆ
ಜಯಲಕ್ಷ್ಮೀ ಪಾಟೀಲ್ ಅವರು ಕನ್ನಡ ಕಿರುತೆರೆ, ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ‘ರಾಮಾಚಾರಿ’, ‘ಕುಲವಧು’, ‘ಬದುಕು’, ‘ನಾಗಿಣಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಆದರೆ ಕಳೆದ ಆರು ತಿಂಗಳಿಂದ ಅವರು ಯಾವುದೇ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಇದೀಗ ಸ್ವತಃ ಜಯಲಕ್ಷ್ಮೀ ಪಾಟೀಲ್ ಬಹಿರಂಗಪಡಿಸಿದ್ದಾರೆ.
ಯಾಕೆಂದರೆ ಹುಷಾರಿಲ್ಲ..
ತಮ್ಮ ಆರೋಗ್ಯದ ಬಗ್ಗೆ ಮಾತನಾಡಿರುವ ಜಯಲಕ್ಷ್ಮೀ ಪಾಟೀಲ್, ನಮಸ್ಕಾರ.. ನನ್ನ ಹೆಸರು ಜಯಲಕ್ಷ್ಮೀ ಪಾಟೀಲ್. ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇರಬಹುದು ಎಂದುಕೊಂಡಿದ್ದೇನೆ. ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಟಿವಿ ಧಾರಾವಾಹಿ, ಸಿನಿಮಾಗಳು ಹಾಗೂ ಆಕಾಶವಾಣಿ ಕಲಾವಿದೆ. ಕಳೆದ ಆರು ತಿಂಗಳಿಂದ ನಾನು ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ‘ರಾಮಾಚಾರಿ’, ‘ಕುಲವಧು’, ‘ಬದುಕು’, ‘ನಾಗಿಣಿ’ ಧಾರಾವಾಹಿಗಳಲ್ಲಿ ನನ್ನನ್ನು ನೀವು ನೋಡಿರಬಹುದು. ಆದರೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಹುಷಾರಿಲ್ಲ ಎಂದು ಹೇಳಿದ್ದಾರೆ. ತಾವು ಎದುರಿಸುತ್ತಿರುವ ಕಿಡ್ನಿ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಬದುಕು ಮತ್ತು ಸಾವಿನ ಬಗ್ಗೆ ತಮ್ಮದೇ ರೀತಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಎರಡೂ ಕಿಡ್ನಿಗಳು ಡಮಾರ್ ಅಂದಿವೆ..
ದೇವರು ಎರಡು ಕಣ್ಣು ಕೊಟ್ಟಿರುತ್ತಾನೆ, ಎರಡು ಕಿಡ್ನಿ ಕೊಟ್ಟಿರುತ್ತಾನೆ, ಎರಡು ಕೈ, ಎರಡು ಕಾಲು ಕೊಟ್ಟಿರುತ್ತಾನೆ. ಒಂದು ಹೋದರೆ ಇನ್ನೊಂದು ಇರಲಿ ಅಂತ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಎರಡೂ ಡಮಾರ್ ಅಂದಿದೆ. ಏನೂ ಮಾಡೋಕೆ ಆಗಲ್ಲ. ದೇವರು ಕೊಟ್ಟ ಆಯುಷ್ಯ. ದೇವರು ಯಾವಾಗ ನಮ್ಮನ್ನು ಈ ಭೂಮಿ ಮೇಲೆ ಹುಟ್ಟು ಅಂತ ಕಳುಹಿಸಿರುತ್ತಾನೋ, ಜೊತೆಗೆ ಸಾವು ಅಂತಾನೂ ಕಳುಹಿಸಿರುತ್ತಾನೆ. ಆ ಸಮಯದಲ್ಲಿ ಯಾವ ಡಾಕ್ಟರ್ ಕೂಡ ನಮ್ಮನ್ನು ಬದುಕಿಸೋಕೆ ಆಗಲ್ಲ. ಯಾವ ಹಣ ಕೂಡ ಬದುಕಿಸೋದಕ್ಕೆ ಆಗಲ್ಲ. ಯಾವ ಸಂಬಂಧಗಳೂ ಬದುಕಿಸೋಕೆ ಆಗಲ್ಲ. ಈಗ ನಾನು ಆ ಪರಿಸ್ಥಿತಿಯಲ್ಲಿದ್ದೇನೆ. ಸಿಂಗಲ್ ಫ್ಯೂಸ್‌ನಲ್ಲಿದ್ದೇನೆ, ಯಾವಾಗ ಬರ್ನ್ ಆಗ್ತೀನೋ ಗೊತ್ತಿಲ್ಲ. ಆದರೆ ನಾನು ಬದುಕಿರುವವರೆಗೂ ಎನರ್ಜೆಟಿಕ್ ಆಗಿ, ಖುಷಿಯಾಗಿಯೇ ಇರ್ತೇನೆ ಎಂದು ಜಯಲಕ್ಷ್ಮೀ ಪಾಟೀಲ್ ಹೇಳಿದ್ದಾರೆ.
ವಾರಕ್ಕೆ ಎರಡು ಬಾರಿ ಡಯಾಲಿಸಿಸ್
ಸದ್ಯ ತಮ್ಮ ಚಿಕಿತ್ಸೆಯ ಭಾಗವಾಗಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನನಗೆ ದೇವಸ್ಥಾನ ಅಂದರೆ ನಮ್ಮ ಹುಬ್ಬಳ್ಳಿ ಕೆಎಂಸಿ ಆಗಿದೆ. ಯಾಕೆಂದರೆ ವಾರದಲ್ಲಿ ಎರಡು ಡಯಾಲಿಸಿಸ್ ತೆಗೆದುಕೊಳ್ಳಬೇಕು. ಬದುಕಬೇಕು ಅನ್ನೋ ಆಸೆ ಇದ್ದರೆ ಖಂಡಿತವಾಗಿಯೂ ತೆಗೆದುಕೊಳ್ಳಬೇಕು. ಏನೂ ಮಾಡೋಕಾಗಲ್ಲ. ತೆಗೆದುಕೊಳ್ಳುತ್ತಿದ್ದೇನೆ. ಅಲ್ಲಿರುವ ಎಲ್ಲಾ ಡಾಕ್ಟರ್‌ಗಳು ನನಗೆ ದೇವರ ಸಮಾನ ಎಂದು ಅವರು ಹೇಳಿದ್ದಾರೆ.
73ರ ವಯಸ್ಸಿನಲ್ಲೂ ಅಭಿನಯದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ
ಜಯಲಕ್ಷ್ಮೀ ಪಾಟೀಲ್ ಅವರ ಜೀವನವೇ ಅಭಿನಯಕ್ಕೆ ಸಮರ್ಪಿತವಾಗಿದೆ. ತಮ್ಮ ಬಾಲ್ಯದಿಂದಲೇ ರಂಗಭೂಮಿಯ ವಾತಾವರಣದಲ್ಲಿ ಬೆಳೆದ ಅವರು, ಮೂರು ತಿಂಗಳ ಮಗುವಾಗಿದ್ದಾಗಿನಿಂದಲೇ ಪಾತ್ರ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ. ನಾನು ರಂಗಭೂಮಿ ಕಲಾವಿದೆ. ಮೂರು ತಿಂಗಳ ಮಗುವಾಗಿದ್ದಾಗಿನಿಂದಲೂ ನಾನು ಪಾತ್ರ ಮಾಡಿಕೊಂಡು ಬಂದಿದ್ದೇನೆ. ನನ್ನ ತಾಯಿ ಕೂಡ ರಂಗಭೂಮಿ ಕಲಾವಿದೆ. ಹೀಗಾಗಿ ಬಾಲ್ಯದಿಂದಲೇ ನಾನು ಕಲಾವಿದೆ. ನನಗೀಗ 73 ವರ್ಷ. ಇಷ್ಟು ವರ್ಷಗಳಲ್ಲಿ ನಟನೆಗೆ ನಾನು ಯಾವತ್ತೂ ಒಂದು ತಿಂಗಳು ಕೂಡ ಗ್ಯಾಪ್ ಕೊಟ್ಟವಳಲ್ಲ ಎಂದು ತಮ್ಮ ಅಭಿನಯದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಆರು ತಿಂಗಳ ವಿರಾಮ ಎದುರಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದುಡ್ಡು ನೀರಿನ ಹಾಗೆ ಖರ್ಚಾಗ್ತಿದೆ.. ಎಲ್ಲಿಂದ ತರ್ಲಿ?
ಚಿಕಿತ್ಸೆಯ ವೆಚ್ಚದ ಬಗ್ಗೆಯೂ ಮಾತನಾಡಿದ ಜಯಲಕ್ಷ್ಮೀ ಪಾಟೀಲ್, ತಮ್ಮ ಪರಿಸ್ಥಿತಿಯ ನಡುವೆ ಸಹಾಯಕ್ಕೆ ಬರುತ್ತಿರುವವರ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಗವಂತ ನನಗೀಗ ಆರು ತಿಂಗಳು ರಜೆ ಅಂತ ಕೊಟ್ಟಿರೋದು ನನ್ನ ಲೈಫ್‌ನಲ್ಲಿ ಇದೇ ಮೊದಲು. ಆದರೆ ಇವತ್ತು ಖುಷಿಯೂ ಆಗ್ತಿದೆ, ದುಃಖವೂ ಆಗ್ತಿದೆ. ದುಡ್ಡು ನೀರಿನ ಹಾಗೆ ಖರ್ಚಾಗ್ತಿದೆ. ಎಲ್ಲಿಂದ ತರಲಿ? ಇನ್ನೂ ಮುಗೀತು ಅನ್ನೋದರೊಳಗೆ ಭಗವಂತ ನನಗೆ ಅವನ ರೂಪದಲ್ಲಿ ಮನುಷ್ಯರನ್ನು ಸಹಾಯ ಮಾಡಲು ಕಳುಹಿಸಿದ್ದಾನೆ. ಇನ್ನೂ ಮುಂದಿನ ತಿಂಗಳು ಹೇಗಪ್ಪಾ ಅನ್ನೋದರೊಳಗೆ, ಇನ್ನೂ ಮೂರು ತಿಂಗಳು ನಾನು ಬದುಕಬಹುದು ಅನ್ನೋ ಮಟ್ಟಿಗೆ ನನಗೆ ಸಹಾಯ, ಸಹಕಾರ ಇದೆ ಎಂದು ಹೇಳಿದ್ದಾರೆ.
ಮತ್ತೆ ಪಾತ್ರ ಮಾಡಬೇಕು ಎಂಬ ಆಸೆ
ಆರೋಗ್ಯ ಸಮಸ್ಯೆಯಿಂದ ಸದ್ಯ ನಟನೆಯಿಂದ ದೂರವಿದ್ದರೂ, ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕು ಎಂಬ ಆಸೆ ತಮ್ಮ ಮನಸ್ಸಿನಲ್ಲಿ ತುಂಬಾ ಇದೆ ಎಂದು ಜಯಲಕ್ಷ್ಮೀ ಪಾಟೀಲ್ ಹೇಳಿದ್ದಾರೆ. ನಾನು ಮತ್ತೆ ಪಾತ್ರ ಮಾಡಬೇಕು ಅನ್ನೋದು ತುಂಬಾ ಮನಸ್ಸಿನಲ್ಲಿದೆ. ಆದರೆ ದೇಹ ಸ್ಪಂದಿಸುತ್ತಿಲ್ಲ. ಮಾಡ್ತೀನಿ ಅನ್ನೋ ವಿಶ್ವಾಸ ನನ್ನಲ್ಲಿದೆ. ಖಂಡಿತ ಮಾಡ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇನ್ನು ದಶಕಗಳ ಕಾಲ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಹಿರಿಯ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಅವರ ಈ ಮಾತುಗಳು ಹಲವರ ಮನಕಲಕುವಂತೆ ಮಾಡಿವೆ. ಆರೋಗ್ಯದ ಸವಾಲಿನ ನಡುವೆಯೂ ಮತ್ತೆ ನಟನೆಯತ್ತ ಮರಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರ ಮಾತುಗಳಿಗೆ ಅಭಿಮಾನಿಗಳು ಹಾಗೂ ಕಿರುತೆರೆ ಪ್ರೇಕ್ಷಕರು ಪ್ರೀತಿಯಿಂದ ಸ್ಪಂದಿಸುತ್ತಿದ್ದಾರೆ.


