ಹಾಸ್ಯನಟ ಚಿಕ್ಕಣ್ಣ, ಉದ್ಯಮಿ ಪಾವನಾ ಗೌಡ ಅವರನ್ನು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿರುವುದರಿಂದ ದರ್ಶನ್‌ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಆ.26): ಹಾಸ್ಯನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದಂಥ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಟ ಚಿಕ್ಕಣ್ಣ ಆಗಸ್ಟ್‌ 29 ಹಾಗೂ 30 ರಂದು ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರು ಮೂಲದ ಪಾವನಾ ಗೌಡ ಅವರನ್ನು ಚಿಕ್ಕಣ್ಣ ವಿವಾಹವಾಗಲಿದ್ದು, ಮದುವೆಯ ಕಾರ್ಯಕ್ರಮಗಳು ಮೈಸೂರಿನ ಸ್ಪೆಕ್ಟ್ರಮ್‌ ಹಾಲ್‌ನಲ್ಲಿ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ಮದುವೆಗೆ ವಿವಿಧ ಗಣ್ಯರನ್ನು ಕರೆಯುವುದರಲ್ಲೇ ಬ್ಯುಸಿಯಾಗಿರುವ ಚಿಕ್ಕಣ್ಣ, ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮದುವೆಯ ವಿಚಾರಗಳನ್ನು ಹಂಚಿಕೊಂಡರು.

ಸುದ್ದೊಗೋಷ್ಠಿಯಲ್ಲಿ ಅವರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಎದುರಾದ ಮೊದಲ ಪ್ರಶ್ನೆ, ದರ್ಶನ್‌ಗೆ ಮದುವೆಯ ಆಮಂತ್ರಣ ನೀಡಿದ್ದೀರಾ ಎನ್ನುವುದಾಗಿತ್ತು. ದರ್ಶನ್‌ ಈಗ ಜೈಲಿನಲ್ಲಿದ್ದಾರೆ. ಮದುವೆಗೆ ಬರೋಕೆ ಆಗೋದಿಲ್ಲ ಎನ್ನುವುದು ಖಚಿತವಾಗಿದ್ದರೂ ಆಮಂತ್ರಣವನ್ನಾದರೂ ನೀಡಬಹುದಿತ್ತು ಎನ್ನುವ ಪ್ರಶ್ನೆಗೆ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾನು ಕೂಡ ಸಾಕ್ಷಿ ಆಗಿದ್ದೇನೆ. ಹಾಗೇನಾದರೂ ದರ್ಶನ್‌ ಅವರು ಜೈಲಿನಲ್ಲಿ ಇಲ್ಲದೆ, ಹೊರಗಡೆ ಇದ್ದರೂ ಅವರನ್ನು ನಾನು ಮದುವೆಗೆ ಕರೆಯುವಂತಿರಲಿಲ್ಲ. ಅವರೂ ಕೂಡ ಬರಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣಕ್ಕೆ ಮದುವೆಗೆ ಅವರನ್ನು ಕರೆದಿಲ್ಲ. ದರ್ಶನ್‌ ಅವರ ಪ್ರಕರಣದಲ್ಲಿ ನಾನೂ ಒಬ್ಬ ಸಾಕ್ಷಿ ಆಗಿರುವ ಕಾರಣ ಇಷ್ಟನ್ನು ಮಾತ್ರವೇ ಈ ಹಂತದಲ್ಲಿ ಹೇಳಲು ಸಾಧ್ಯ ಎಂದಿದ್ದಾರೆ.

ಟಾಕ್ಸಿಕ್‌ ಸಿನಿಮಾ ನೋಡ್ತೇನೆ..

ಆದರೆ, ದರ್ಶನ್‌ ಅವರ ಡೆವಿಲ್‌ ಸಿನಿಮಾವನ್ನು ನಾನು ಹಾಗೂ ಪಾವನಾ ಗೌಡ ಇಬ್ಬರೂ ಜೊತೆಯಾಗಿ ನೋಡಿದ್ದೇವೆ. ಮದುವೆಯಾದ ಬಳಿಕ ನಾವು ಜೋಡಿಯಾಗಿ ನೋಡುವ ಮೊದಲ ಚಿತ್ರ ಟಾಕ್ಸಿಕ್‌ ಎಂದು ಹೇಳಿದ್ದಾರೆ. ಮದುವೆಯ ಕಾರ್ಯಕ್ರಮ ಮುಗಿದ ಬಳಿಕ ನಾನು ಸಿನಿಮಾ ನೋಡುತ್ತೇನೆ. ಯಶ್‌ ನನಗೆ ಮೊದಲಿನಿಂದಲೂ ನಾನು ಪರಿಚಯ ಅವರನ್ನು ಅಣ್ಣ ಎಂದೇ ಕರೆಯುತ್ತೇನೆ ಎಂದಿದ್ದಾರೆ. ಚಿಕ್ಕಣ್ಣ ಅವರ ಮದುವೆಯ ಕಾರ್ಯಕ್ರಮದಲ್ಲಿ ಕನ್ನಡದ ನಟ-ನಟಿಯರು ಭಾಗಿಯಾಗುವ ನಿರೀಕ್ಷೆ ಇದೆ.

ಚಿಕ್ಕಣ್ಣ ಅವರ ಭಾವಿ ಪತ್ನಿ ಪಾವನಾ ಗೌಡ ಉದ್ಯಮಿಯಾಗಿದ್ದು, ಜೈವಿಕವಾಗಿ ವಿಘಟನಗೊಳ್ಳುವ (ಬಯೋಡಿಗ್ರೇಡಬಲ್) ಉತ್ಪನ್ನಗಳನ್ನ ತಯಾರಿಸುವ ಉದ್ಯಮವನ್ನ ನಡೆಸುತ್ತಿದ್ದಾರೆ. 'ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನ ತಯಾರಿಸುವ ಬ್ಯಸಿನೆಸ್‌ಅನ್ನು ಪಾವನಾ ಮಾಡುತ್ತಾರೆ . ಇಂತಹ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ” ಎಂದು ಹೆಮ್ಮೆಯಿಂದ ಚಿಕ್ಕಣ್ಣ ಹೇಳಿದ್ದಾರೆ.