ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಸ್ಪರ್ಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತಾಭ್ ಬಚ್ಚನ್, ತಾವೇ ಮನೆಯಲ್ಲಿ ಪಾತ್ರೆ ತೊಳೆಯುವುದು, ಕ್ಲೀನಿಂಗ್ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇದೇ ವೇಳೆ ಪತ್ನಿ ಜಯಾ ಬಚ್ಚನ್ ತಮಗಾಗಿ ವಿಶೇಷ ಸೂಪ್ ಮಾಡಿದ್ದನ್ನು ನೆನೆದು ಶ್ಲಾಘಿಸಿದ್ದು, ನೆಟ್ಟಿಗರು ಅಮಿತಾಭ್ ಪತ್ನಿಗೆ ಹೆದರುತ್ತಾರೆ ಎಂದು ತಮಾಷೆ ಮಾಡಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಇದೀಗ 18ನೇ ಸೀಸನ್ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ.
ಅಂದಹಾಗೆ ಅಮಿತಾಭ್ ಅವರಿಗೆ ಈಗ 83 ವರ್ಷ ವಯಸ್ಸು. ಇದರ ಹೊರತಾಗಿಯೂ ಅದೇ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಕೌನ್ ಬನೇಗಾ ಕರೋರ್ಪತಿಯಲ್ಲಿಯೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಸಾಕಷ್ಟು ಫನ್ನಿ ಸನ್ನಿವೇಶಗಳನ್ನೂ ಈ ಷೋನಲ್ಲಿ ನಟ ಸೃಷ್ಟಿಸುತ್ತಾರೆ. ಇದೀಗ ಮಹಿಳೆಯೊಬ್ಬರು ನಟನಿಗೆ ತಮಾಷೆಯ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆದರೆ ಅದಕ್ಕೆ ಅಮಿತಾಭ್ ನೀಡಿರುವ ಉತ್ತರ ಕೇಳಿ ಮಾತ್ರ ಎಲ್ಲರೂ ಹೌಹಾರಿ ಹೋಗಿದ್ದಾರೆ.
ಮನೆಯಲ್ಲಿ ಕೆಲ್ಸ ಮಾಡೋದು ನಾನೇ!
ಮಹಿಳೆ ನಟನಿಗೆ, ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಕೆಲಸದವರು ಇರಬಹುದು. ಒಂದು ವೇಳೆ ಎಲ್ಲರೂ ಒಂದೇ ದಿನ ರಜೆ ತೆಗೆದುಕೊಂಡ್ರೆ ಮೇಡಂ ನಿಮ್ಮ ಹತ್ತಿರ ಕೆಲ್ಸ ಮಾಡಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಮಿತಾಭ್, ಮನೆಯಲ್ಲಿ 2, 3, 5, 10 ಎಷ್ಟೇ ಕೆಲಸದವರು ಇರಲಿ, ಬಿಡಲಿ ಎಲ್ಲಾ ಕೆಲಸ ಮಾಡುವುದು ನಾನೇ ಎಂದಿದ್ದಾರೆ. ಮನೆ ಕ್ಲೀನ್ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲವನ್ನೂ ಮಾಡುತ್ತೇನೆ. ಅಡುಗೆ ಮಾತ್ರ ಮಾಡುವುದಿಲ್ಲ ಎಂದಿದ್ದಾರೆ.
ಪತ್ನಿಯ ಶ್ಲಾಘನೆ
ಇದೇ ವೇಳೆ, ಸದಾ ಸಿಡುಕಿನಿಂದಲೇ ಫೇಮಸ್ ಆಗಿರೋ ಪತ್ನಿ ಜಯಾ ಬಚ್ಚನ್ ಬಗ್ಗೆಯೂ ತಿಳಿಸಿರುವ ನಟ, ನಾನು ಅಕ್ಕಿ ತಿನ್ನುವುದಿಲ್ಲ. ಅದಕ್ಕಾಗಿಯೇ ಒಮ್ಮೆ ಜಯಾ ನನಗಾಗಿ ಮ್ಯಾಂಗೊ ಖೀರ್ ಮಾಡಿದ್ದರು, ತುಂಬಾ ಚೆನ್ನಾಗಿತ್ತು ಎಂದು ಹೇಳಿ ಅಲ್ಲಿಂದಲೇ ಪತ್ನಿಗೆ ನಮಸ್ಕರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಅಬ್ಬಾ ಜಯಾರಿಗೆ ನಟ ಎಷ್ಟು ಹೆದರುತ್ತಾರೆ ಎಂದು ಇಲ್ಲಿಯೇ ತಿಳಿಯುತ್ತದೆ ಎನ್ನುತ್ತಿದ್ದಾರೆ! ಒಂದು ದಿನ ಮಾತ್ರ ಮಾಡಿದ್ದು ಎಂದು ಅಮಿತಾಭ್ ಹೇಳುವುದನ್ನು ನೋಡಿದ್ರೆ, ಉಳಿದ ಕೆಲಸವೆಲ್ಲಾ ನಟನೇ ಮಾಡುವುದು ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ.


