ಗಾಯಕಿ ಅರ್ಚನಾ ಉಡುಪ ಅವರು ರಾಯಲ್ ಎನ್‌ಫೀಲ್ಡ್‌ನ ಮೊಟ್ಟಮೊದಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫೆಲಾ' ಖರೀದಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈ ಲೇಖನವು ಅವರ ಸಂತಸದ ಕ್ಷಣಗಳ ಜೊತೆಗೆ, ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ಬೆಲೆ, ಬ್ಯಾಟರಿ, ವೇಗ, ಮತ್ತು ವಿನ್ಯಾಸದ ವಿವರ ಇಲ್ಲಿದೆ.
ಬೆಂಗಳೂರು (ಆ.25): ಸಿನಿಮಾ, ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರುವ ಹಲವು ಮಂದಿ ತಮ್ಮ ಗ್ಯಾರೇಜ್‌ಗೆ ಒಂದು ಕಾರ್ ಇರಬೇಕು ಎನ್ನುವ ಕಾರಣಕ್ಕೆ ಹೊಸ ಹೊಸ ಕಾರ್ ಖರೀದಿ ಮಾಡಲು ಉತ್ಸಾಹ ತೋರುತ್ತಿದ್ದಾರೆ. ಇದರ ನಡುವೆ ಗಾಯಕಿ ಅರ್ಚನಾ ಉಡುಪ ಡಿಫರೆಂಟ್ ಆಗಿರುವ ಸಾಹಸ ಮಾಡಿದ್ದಾರೆ. ಹೌದು, ಎಲ್ಲರೂ ಕಾರ್ ಖರೀದಿ ಮಾಡ್ತಿರೋ ಟೈಮ್‌ನಲ್ಲಿ ಅರ್ಚನಾ ಉಡುಪ, ರಾಯಲ್ ಎನ್‌ಫೀಲ್ಡ್ ಕಂಪನಿಯ ಮೊಟ್ಟಮೊದಲ ಎಲೆಕ್ಟ್ರಿಕ್ ಬೈಕ್ Flying Felaಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
'ಚಿಕ್ಕ ವಯಸ್ಸಿನಲ್ಲೇ ಬೈಕ್ ಎಂದರೆ ಅದೇನೋ ಆಸೆ..ನನ್ನ ಹುಟ್ಟೂರಿನಲ್ಲಿ ಇದ್ದಾಗ, ನನ್ನ ಕಾಲುಗಳು ನೆಲಕ್ಕೆ ತಾಗದೇ ಇರುವಷ್ಟು ಪುಟ್ಟ ಹುಡುಗಿಯಾಗಿದ್ದಾಗಲೇ ಬೈಕ್ ಓಡಿಸಲು ಕಲಿತುಬಿಟ್ಟಿದ್ದೆ. ನನ್ನ ತಂದೆಯ ಸ್ನೇಹಿತ ಅಜಯ್ ನನ್ನ ಕುತೂಹಲವನ್ನು ಗಮನಿಸಿ ಅದಕ್ಕೆ ನೀರೆರೆದು ನನಗೆ ಬೈಕ್ ಓಡಿಸುವ ವಿದ್ಯೆ ಕಲಿಸಿದರು, ಆಗ ತಾನೇ ಹೊಸದಾಗಿ ಪರಿಚಯಿಸಲಾಗಿದ್ದ ಮೊಟ್ಟ ಮೊದಲ 4 ಸ್ಟ್ರೋಕ್ ಬೈಕ್ ಮೂಲಕ. ಅಲ್ಲಿಂದ ನನಗೆ ಮುಂದೊಂದು ದಿನ ನಾನೂ ಒಂದು ಬೈಕ್ ಖರೀದಿ ಮಾಡಬೇಕು, ಎಲ್ಲಾ ಕಡೆ ತಿರುಗಬೇಕು ಅನ್ನುವ ಹಂಬಲ ಮನದಲ್ಲಿ ಮನೆ ಮಾಡಿತ್ತು. ಅಂತೂ ಇಂತೂ ಇಂದು ನಾನು Royal Enfield ನ ಮೊಟ್ಟ ಮೊದಲ ವಿದ್ಯುತ್ ಚಾಲಿತ ವಾಹನ "Flying Fela" ಯನ್ನು ನನ್ನದಾಗಿಸಿಕೊಂಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
Flying Fela ಮೂಲಕ ಬುಲೆಟ್ ಪ್ರಿಯರ ನೆಚ್ಚಿನ ರಾಯಲ್ ಎನ್‌ಫೀಲ್ಡ್ (Royal Enfield) ಸಂಸ್ಥೆಯು ಇವಿ ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿಟ್ಟಿದೆ. ಹಳೆಯ ಕ್ಲಾಸಿಕ್ ವಿನ್ಯಾಸದ ಜೊತೆಗೆ ಆಧುನಿಕ ಟೆಕ್ನಾಲಜಿಯನ್ನು ಮೇಳೈಸಿರುವ ಈ ಬೈಕ್, ಪ್ರೀಮಿಯಂ ಎಲೆಕ್ಟ್ರಿಕ್ ಶ್ರೇಣಿಯಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಮಹಾಯುದ್ಧದ ಸಮಯದಲ್ಲಿ ಪ್ಯಾರಾಚೂಟ್ ಮೂಲಕ ರವಾನಿಸುತ್ತಿದ್ದ ರಾಯಲ್ ಎನ್‌ಫೀಲ್ಡ್‌ನ ಹಗುರವಾದ 'ಫ್ಲೈಯಿಂಗ್ ಫ್ಲೀ' ಬೈಕ್‌ನ ಹೆಸರನ್ನೇ ಈ ಇವಿ ಮಾದರಿಗೂ ಮರುನಾಮಕರಣ ಮಾಡಲಾಗಿದೆ.
ಬೆಲೆ ಮತ್ತು ಬಣ್ಣಗಳು
- ಬೆಲೆ: ₹2.79 ಲಕ್ಷ (ಎಕ್ಸ್-ಷೋರೂಮ್ ಬೆಂಗಳೂರು),
- ಬಣ್ಣಗಳು: ಫ್ಲೀ ಗ್ರೀನ್ (Flea Green) ಮತ್ತು ಸ್ಟಾರ್ಮ್ ಬ್ಲ್ಯಾಕ್ (Storm Black).
- ಸ್ಥಾನಮಾನ: ನಗರ ಪ್ರದೇಶದ ಸವಾರಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪ್ರೀಮಿಯಂ ಇವಿ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ.
ಬ್ಯಾಟರಿ, ಚಾರ್ಜಿಂಗ್ ಮತ್ತು ರೇಂಜ್ (Range)
- ಬ್ಯಾಟರಿ ಸಾಮರ್ಥ್ಯ: 3.91kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್.
- ಚಾಲನಾ ವ್ಯಾಪ್ತಿ (Range): ಒಂದೇ ಚಾರ್ಜ್‌ನಲ್ಲಿ ಗರಿಷ್ಠ 154 ಕಿ.ಮೀ ರೇಂಜ್ (IDC ಪ್ರಕಾರ) ನೀಡುತ್ತದೆ.
- ಚಾರ್ಜಿಂಗ್ ಸಮಯ: 20% ರಿಂದ 80% ಚಾರ್ಜ್ ಆಗಲು ಕೇವಲ 65 ನಿಮಿಷ ಸಾಕು. ಸಂಪೂರ್ಣ (0-100%) ಚಾರ್ಜ್ ಆಗಲು 2 ಗಂಟೆ 16 ನಿಮಿಷ ಸಮಯ ತೆಗೆದುಕೊಳ್ಳುತ್ತದೆ.
ವೇಗ ಮತ್ತು ಪವರ್ (Performance)
- ಮೋಟರ್ ಪವರ್: 15.4kW ಪೀಕ್ ಪವರ್ ಮತ್ತು 60Nm ಟಾರ್ಕ್ ಉತ್ಪಾದಿಸುವ ಮೋಟರ್ ಹೊಂದಿದ್ದು, ಗರಿಷ್ಠ 115kmph ವೇಗದಲ್ಲಿ ಚಲಿಸುತ್ತದೆ.
- ಪಿಕಪ್: ಕೇವಲ 3.7 ಸೆಕೆಂಡುಗಳಲ್ಲಿ 0-60kmph ವೇಗ ಪಡೆದುಕೊಳ್ಳುತ್ತದೆ.
- ತೂಕ: ಅಲ್ಯೂಮಿನಿಯಂ ಹಾಗೂ ಮೆಗ್ನೀಸಿಯಮ್ ಭಾಗಗಳನ್ನು ಬಳಸಿರುವುದರಿಂದ ಬೈಕ್‌ನ ತೂಕ ಕೇವಲ 124 ಕೆಜಿ ಇರಲಿದ್ದು, ಸಿಟಿ ಟ್ರಾಫಿಕ್‌ನಲ್ಲಿ ಸುಲಭವಾಗಿ ಚಲಾಯಿಸಲು ನೆರವಾಗುತ್ತದೆ.
ವಿನ್ಯಾಸ ಮತ್ತು ಸ್ಮಾರ್ಟ್ ಫೀಚರ್‌ಗಳು
- ಕ್ಲಾಸಿಕ್ ವಿನ್ಯಾಸ: ರೌಂಡ್ ಹೆಡ್‌ಲ್ಯಾಂಪ್, 19-ಇಂಚಿನ ವೀಲ್‌ಗಳು ಮತ್ತು ವಿಶಿಷ್ಟವಾದ 'ಗರ್ಡರ್-ಸ್ಟೈಲ್' (Girder-style) ಫ್ರಂಟ್ ಸಸ್ಪೆನ್ಷನ್ ಬೈಕ್‌ಗೆ ಅಲ್ಟ್ರಾ-ರೆಟ್ರೋ ಲುಕ್ ನೀಡಿದೆ.
- ಡಿಜಿಟಲ್ ಡಿಸ್ಪ್ಲೇ: ನ್ಯಾವಿಗೇಷನ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ 3.5-ಇಂಚಿನ ವರ್ತುಲಾಕಾರದ TFT ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್ ನೀಡಲಾಗಿದೆ.
ಸುರಕ್ಷತೆ & ಹೈಟೆಕ್ ಆಯ್ಕೆಗಳು
- ಲೀನ್-ಆಂಗಲ್ ಸೆನ್ಸಿಟಿವ್ ABS ಮತ್ತು ಟ್ರ್ಯಾಕ್ಷನ್ ಕಂಟ್ರೋಲ್.
- ಕ್ರೂಸ್ ಕಂಟ್ರೋಲ್ (Cruise Control) ಹಾಗೂ ಹಿಲ್-ಹೋಲ್ಡ್ ಅಸಿಸ್ಟ್.
- ಕೀಲೆಸ್ ಆಪರೇಷನ್ (Keyless), ಎಲೆಕ್ಟ್ರಾನಿಕ್ ಹ್ಯಾಂಡಲ್‌ಬಾರ್ ಲಾಕ್ ಮತ್ತು USB-C ಚಾರ್ಜಿಂಗ್ ಪೋರ್ಟ್.
- ವಿವಿಧ ಚಾಲನಾ ವಿಧಾನಗಳಿಗೆ ತಕ್ಕಂತೆ ರೈಡಿಂಗ್ ಮೋಡ್‌ಗಳು.
ಸಾಂಪ್ರದಾಯಿಕ ಪೆಟ್ರೋಲ್ ಬೈಕ್‌ಗಳಿಂದ ಸಂಪೂರ್ಣ ಭಿನ್ನ ಹಾದಿ ಹಿಡಿದಿರುವ ರಾಯಲ್ ಎನ್‌ಫೀಲ್ಡ್, ತನ್ನ ಹೊಸ 'ಫ್ಲೈಯಿಂಗ್ ಫ್ಲೀ' ಸರಣಿಯ ಮೂಲಕ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.


