ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಕಾಮಗಾರಿಯಿಂದಾಗಿ, ಆಗಸ್ಟ್ 19 ರಿಂದ 26 ರವರೆಗೆ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ನಾಳೆ ಅರ್ಥಾತ್​ ಆಗಸ್ಟ್​ 19ರಿಂದ ಬರುವ 26ನೇ ತಾರೀಖಿನವರೆಗೆ ಕೆಲವೊಂದು ದಿನಾಂಕಗಳಲ್ಲಿ ತಾಳಗುಪ್ಪ-ಬೆಂಗಳೂರು ಎಕ್ಸ್​ಪ್ರೆಸ್​ ಸೇರಿ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. ಮಲ್ಲಸಂದ್ರ ಮತ್ತು ಗುಬ್ಬಿ ನಡುವೆ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆ ಈ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ತಾಳಗುಪ್ಪ ಹಾಗೂ ಶಿವಮೊಗ್ಗ ಮಾರ್ಗದ ಪ್ರಮುಖ ರೈಲುಗಳ ಸಂಚಾರ ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗಿದ್ದು, ಅವುಗಳ ಫುಲ್​ ಡಿಟೇಲ್ಸ್​ ಇಲ್ಲಿದೆ:

ಭಾಗಶಃ ರದ್ದು ಆಗಲಿರುವ ರೈಲುಗಳು

ರೈಲು ಸಂಖ್ಯೆ 20652: ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (Talguppa – KSR Bengaluru Express) ರೈಲಿನ ಸಂಚಾರವು ಭಾಗಶಃ ರದ್ದಾಗಲಿದೆ. ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಅರಸೀಕೆರೆಯಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಮುಂದೆ ಹೋಗುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ರೈಲು ಸಂಖ್ಯೆ 20689: ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ( Yesvantpur–Shivamogga Town Intercity Express) ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಈ ರೈಲುಗಳ ಸೇವೆ ರದ್ದು

  • ಆಗಸ್ಟ್ 19 ಮತ್ತು 26 ರಂದು ಈ ರೈಲುಗಳ ಸೇವೆ ರದ್ದು ಆಗಲಿವೆ. ಅವುಗಳೆಂದರೆ
  • ಚಿಕ್ಕಮಗಳೂರು–ಯಶವಂತಪುರ (ರೈಲು ಸಂಖ್ಯೆ: 16239),
  • ಯಶವಂತಪುರ–ಚಿಕ್ಕಮಗಳೂರು (ರೈಲು ಸಂಖ್ಯೆ: 16240),
  • ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (ರೈಲು ಸಂಖ್ಯೆ: 12614),
  • ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (ರೈಲು ಸಂಖ್ಯೆ: 66567) ಹಾಗೂ
  • ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ: 66572)
  • ಅದೇ ರೀತಿ, ಆಗಸ್ಟ್ 19, 22 ಮತ್ತು 26 ರಂದು ಯಲಹಂಕ–ಅರಸೀಕೆರೆ (ರೈಲು ಸಂಖ್ಯೆ: 66505) ಮತ್ತು ಅರಸೀಕೆರೆ–ಯಲಹಂಕ (ರೈಲು ಸಂಖ್ಯೆ: 66506) ಮೆಮು ರೈಲುಗಳ ಸಂಚಾರವೂ ಇರುವುದಿಲ್ಲ. 
  • ಅಂತೆಯೇ, ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 17310) ಹಾಗೂ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20676) ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.