ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಖಾಸಗಿ ಹೋಂ ಸ್ಟೇ ಒಂದರಲ್ಲಿ ರೈತ ಸಂಘದ ಮುಖಂಡರು ಅಪಾರ ಪ್ರಮಾಣದ ವನ್ಯಜೀವಿಗಳ ಚರ್ಮ, ಕೊಂಬು ಹಾಗೂ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ವಸ್ತುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಘಟನೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.
ಗುಂಡ್ಲುಪೇಟೆ (ಆ.19) ಚಾಮರಾಜನಗರ ಜಿಲ್ಲೆ(Chamarajanagar) ಹನೂರು(Hanuru) ಅರಣ್ಯ ಪ್ರದೇಶದಲ್ಲಿ ಮೂವರು ಬೇಟೆಗಾರರ ಮೇಲೆ ಎನ್‌ಕೌಂಟರ್ ಪ್ರಕರಣ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಖಾಸಗಿ ಹೋಂ ಸ್ಟೇನಲ್ಲಿ ವನ್ಯಜೀವಿಗಳ ಚರ್ಮ, ಕೊಂಬು, ಗನ್, ರಿವಾಲ್ವರ್ ಹಾಗೂ ಏರ್‌ಸ್ಪೇಸ್ ಪಿಸ್ತೂಲ್‌ಗಳನ್ನು ರೈತ ಸಂಘ ಮುಖಂಡರು ಪತ್ತೆ ಹಚ್ಚಿದ್ದು, ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಎಲ್ಲಿ ಪತ್ತೆಯಾಗಿದ್ದು?
ರೈತ ಸಂಘದ ಕಾರ್ಯಕರ್ತರು ಕೆಬ್ಬೇಪುರ ಗ್ರಾಮದ ಸ.ನಂ.೧೧೬ರಲ್ಲಿ ನಿವೃತ್ತ ಸೇನಾಧಿಕಾರಿ ಜೇಕಬ್ ಎನ್ನುವವರ ಮಗಳ ಹೆಸರಿನ ಜಮೀನಿನಲ್ಲಿರುವ ಹೋಂ ಸ್ಟೇನಲ್ಲಿ, 48 ಜಿಂಕೆ ಕೊಂಬು, ನವಿಲುಗರಿಗಳು, ಪ್ರಾಣಿ ಚರ್ಮ, 4 ಗನ್, 1 ರಿವಾಲ್ವರ್, ಎರ್‌ಸ್ಪೇಸ್ ಪಿಸ್ತೂಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಕಾರ್ಯಕರ್ತರ ಮಾಹಿತಿ ಮೇರೆಗೆ ಬಂಡೀಪುರ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪತ್ತೆ ಹಚ್ಚಿದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಂಥ ಘಟನೆಗಳಿಗೆ ಕಾರಣವಾಗಿದೆ. ಹೋಂ ಸ್ಟೇನಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಸಂಘದ ಮುಖಂಡ ಶಶಿ ಆಗ್ರಹಿಸಿದ್ದಾರೆ.
