ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತೆಪ್ಪ ಸಮೇತ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಉಳಿದಿಬ್ಬರಿಗಾಗಿ ಎಸ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

ವಿಜಯನಗರ (ಆ.19): ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತೆಪ್ಪ ಸಮೇತ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಇವರಲ್ಲಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಎಸ್‌ಡಿಆರ್‌ಎಫ್ (SDRF) ತಂಡ ಮತ್ತು ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕಾಣೆಯಾದ ದುರ್ದೈವಿಗಳು ಯಾರು?

ರಾಜ (22 ವರ್ಷ) – (ನಾಪತ್ತೆ)

ಯಮನೂರಪ್ಪ (20 ವರ್ಷ) – (ಮೃತದೇಹ ಪತ್ತೆ)

ಅಜ್ಜಪ್ಪ (26 ವರ್ಷ) – (ನಾಪತ್ತೆ)

ಘಟನೆಯ ವಿವರ: ತೆಪ್ಪ ಸಮೇತ ನಾಪತ್ತೆ!

ತಂಬ್ರಳ್ಳಿ ಗ್ರಾಮದ ಈ ಮೂವರು ಯುವಕರು ನಿನ್ನೆ (ಮಂಗಳವಾರ) ಮಧ್ಯಾಹ್ನ ನದಿಯಲ್ಲಿ ಮೀನು ಹಿಡಿಯಲೆಂದು ತೆಪ್ಪದಲ್ಲಿ ತೆರಳಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ ಗಾಬರಿಗೊಂಡು ತಂಬ್ರಳ್ಳಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ನದಿಯಲ್ಲಿ ಯುವಕರು ತೆರಳಿದ್ದ ತೆಪ್ಪ ಕೂಡ ಪತ್ತೆಯಾಗದ ಕಾರಣ, ಗಾಳಿ-ಮಳೆಯ ಅಲೆಗಳ ಹೊಡೆತಕ್ಕೆ ಸಿಲುಕಿ ತೆಪ್ಪ ಮಗುಚಿ ಮೂವರೂ ನೀರಿನಲ್ಲಿ ಮುಳುಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು.

ಓರ್ವನ ಶವ ಪತ್ತೆ – ಮುಂದುವರಿದ ಎಸ್‌ಡಿಆರ್‌ಎಫ್ ಕಾರ್ಯಾಚರಣೆ:

ಸ್ಥಳೀಯರು ಮತ್ತು ಪೊಲೀಸರು ಇಂದು ಮುಂಜಾನೆಯಿಂದಲೇ ಜಂಟಿ ಶೋಧ ಕಾರ್ಯ ಆರಂಭಿಸಿದ್ದರು. ಕಾರ್ಯಾಚರಣೆ ವೇಳೆ ಯಮನೂರಪ್ಪ (20) ಎಂಬ ಯುವಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಉಳಿದ ಇಬ್ಬರಾದ ರಾಜ ಹಾಗೂ ಅಜ್ಜಪ್ಪ ಅವರ ಸುಳಿವು ಇನ್ನೂ ಸಿಗದ ಕಾರಣ, ಹಗರಿಬೊಮ್ಮನಹಳ್ಳಿ ಪೊಲೀಸರು ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಸ್ಥಳಕ್ಕೆ ಕರೆಸಿದ್ದಾರೆ. ಸದ್ಯ ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಬೋಟ್‌ಗಳ ನೆರವಿನಿಂದ ಹಿನ್ನೀರಿನ ಆಳವಾದ ಪ್ರದೇಶದಲ್ಲಿ ಉಳಿದವರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂಬ್ರಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.