ದಸರಾ ರಜೆ ಸಮೀಪಿಸುತ್ತಿದೆ. ಮಕ್ಕಳು ಮನೆಯಲ್ಲೇ ಇರುತ್ತಾರೆ. ಒಂದೆರಡು ದಿನ ಆಚೆ ಹೋಗಿ ಬರೋಣ ಅನ್ಕೊಂಡಿದ್ದರೆ ಬೇರೆ ಎಲ್ಲೋ ಹೋಗೋದ್ಕಿಂತ ಕರ್ನಾಟಕದಲ್ಲೇ ಇರುವ ಸ್ಥಳಗಳಿಗೆ ಹೋಗಿ ಸಖತ್ ಎಂಜಾಯ್ ಮಾಡಬಹುದು. ಯಾವುದು ಆ ಸ್ಥಳಗಳು? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ದಸರಾ ಬರುತ್ತಿದೆ. ಶಾಲೆಗಳಿಗೆ ರಜೆ, ಮಕ್ಕಳೂ ಫ್ರಿಯಾಗಿ ಇರುತ್ತಾರೆ. ಒಂದೆರಡು ದಿನ ಟ್ರಿಪ್‌ಗೆ ಹೋಗಿ ಹಾಯಾಗಿದ್ದು ಬರೋಣ ಅನ್ನೋ ಪ್ಲಾನ್‌ ಇದ್ಯಾ? ಟ್ರಿಪ್‌ಗೆ ಹೋಗೋದೇನೋ ಸರಿ? ಎಲ್ಲಿಗೆ ಹೋಗಬೇಕು? ನಮ್ಮದೇ ರಾಜ್ಯದಲ್ಲಿರುವ ಸ್ಥಳಗಳಿಗಾ? ಅಥವಾ ಬೇರೆ ರಾಜ್ಯದಲ್ಲಿರೋ ಊರುಗಳಿಗಾ ಎಂಬ ಗೊಂದಲ ಸಹಜ. ನೀವು ಕರ್ನಾಟಕದಲ್ಲಿರೋ ಸ್ಥಳಗಳಿಗೆ ಭೇಟಿ ನೀಡೋದಾಗಿದ್ದರೆ ಪ್ರಮುಖ ಐದು ಸ್ಥಳಗಳ ಮಾಹಿತಿ ಇಲ್ಲಿದೆ..

ಹೌದು ದಸರಾ ರಜೆ ಕುಟುಂಬ ಪ್ರವಾಸಕ್ಕೆ ಹೋಗಲು ಅತ್ಯಂತ ಸೂಕ್ತವಾದ ಸಮಯ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಹೊತ್ತಿನಲ್ಲಿ ನೀವು ಟ್ರಿಪ್‌ಗೆ ಹೊರಟರೆ ಅದ್ಭುತ ಅನುಭವ ಸಿಗಲಿದೆ. ಅದರಲ್ಲೂ ಕರ್ನಾಟಕದ ಪ್ರಕೃತಿ ಸೌಂದರ್ಯ ಸವಿಯಲು ಹೇಳಿ ಮಾಡಿದ ಸಮಯ. ದೂರ ಎಲ್ಲೋ ಹೋಗುವ ಅಗತ್ಯ ಇಲ್ಲ ನಮ್ಮದೇ ರಾಜ್ಯದಲ್ಲಿರುವ ಸಂಸ್ಕೃತಿ, ಇತಿಹಾಸ, ಗಿರಿಧಾಮ ಹಾಗೂ ಕಡಲತೀರಗಳ ಅದ್ಭುತ ಸಂಗಮವು ನಿಮ್ಮ ಎಲ್ಲಾ ಒತ್ತಡಗಳನ್ನ ದೂರ ಮಾಡಿ ಆನಂದಮಯವಾಗಿ ನೆಮ್ಮದಿಯನ್ನ ನೀಡೋದ್ರಲ್ಲಿ ಎರಡು ಮಾತಿಲ್ಲ.

ಮೈಸೂರಿಗೆ ಹೋಗಿ ಬನ್ನಿ

ಇನ್ನೇನು ದಸರಾ ಶುರುವಾಗಲಿದೆ. ದಸರಾ ಅಂದಾಕ್ಷಣ ನೆನಪಿಗೆ ಬರೋದೇ ಮೈಸೂರು. ಸಾಂಸ್ಕೃತಿಕ ನಗರ ಮೈಸೂರು ನಿಮ್ಮ ಪ್ರವಾಸಕ್ಕೆ ಬೆಸ್ಟ್ ಪ್ಲೇಸ್. ಅಲ್ಲಿ ನಡೆಯುವ ನಾಡಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಲು ದಸರಾ ರಜೆ ಬೆಸ್ಟ್. ದಸರಾ ವೇಳೆ ನೀವು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದರೆ ಏನೆಲ್ಲ ನೋಡಬಹುದು ಅನ್ನೋ ವಿವರ ಹೀಗಿದೆ..

  • ದೀಪಾಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆ
  • ಐತಿಹಾಸಿಕ ಜಂಬೂಸವಾರಿ
  • ವಸ್ತುಪ್ರದರ್ಶನ (Exhibition)
  • ಚಾಮುಂಡಿ ಬೆಟ್ಟ
  • ಬೃಂದಾವನ ಗಾರ್ಡನ್ ಮತ್ತು ಮೃಗಾಲಯಗಳು
  • ಇಡೀ ನಗರವೇ ಹಬ್ಬದ ವಾತಾವರಣದಲ್ಲಿ ಮುಳುಗಿರುತ್ತದೆ

ಕೂರ್ಗ್

ರೋಮಾಂಚನಕಾರಿ ಪ್ರವಾಸದ ಅನುಭವ ಬೇಕು ಅಂದರೆ ನೀವು ಮಡಿಕೇರಿ ದಸರಾಗೂ ಹೋಗಬಹುದು. ಇಲ್ಲಿ ರಾತ್ರಿಯಿಡೀ ವೈಭವೋಪೇತ ದಶಮಂಟಪಗಳ ಮೆರವಣಿಗೆ ನಡೆಯಲಿದೆ. ಇದನ್ನು ನೋಡೋದೇ ಒಂದು ಅದ್ಭುತ ಅನುಭವ. ಎಲ್ಲಿಗೆ ಹೋದರೆ ಏನೆಲ್ಲ ನೋಡೋಕೆ ಸಿಗುತ್ತದೆ ಅನ್ನೋ ವಿವರ ಇಲ್ಲಿದೆ.

  • ಮಡಿಕೇರಿಯ ರಾಜಾಸೀಟ್
  • ಅಬ್ಬಿ ಜಲಪಾತ
  • ಭಾಗಮಂಡಲ
  • ಕಾವೇರಿಯ ಉಗಮಸ್ಥಾನ ತಲಕಾವೇರಿ

ಇನ್ನು ಅಕ್ಟೋಬರ್‍‌ನಲ್ಲಿ ತಲಾಕಾವೇರಿಯಲ್ಲಿ ತೀರ್ಥೋದ್ಭವ ನಡೆಯೋದ್ರಿಂದ ಧಾರ್ಮಿಕವಾಗಿಯೂ ಈ ಸ್ಥಳ ತುಂಬಾನೇ ಮಹತ್ವ ಪಡೆದುಕೊಂಡಿದೆ.

ಚಿಕ್ಕಮಗಳೂರು

ಮಡಿಕೇರಿ, ಮೈಸೂರು ಯಾವುದೂ ಬೇಡ. ಈ ಸಲ ನಾನು ಬರೀ ನೇಚರ್ ಮಾತ್ರ ಎಂಜಾಯ್ ಮಾಡ್ತೇನೆ ಅಂದುಕೊಂಡರೆ ಚಿಕ್ಕಮಗಳೂರು ಬೆಸ್ಟ್ ಆಪ್ಷನ್.

  • ಮುಳ್ಳಯ್ಯನಗಿರಿ
  • ಬಾಬಾಬುಡನ್‌ಗಿರಿ
  • ಮಾಣಿಕ್ಯಧಾರಾ
  • ಹೆಬ್ಬೆ ಜಲಪಾತಗಳು ಆಕರ್ಷಿಸುತ್ತವೆ
  • ಕಾಫಿ ತೋಟಗಳ ನಡುವೆ ಹೋಂಸ್ಟೇಗಳಲ್ಲಿ ವಿಶ್ರಾಂತಿ ಪಡೆಯಬಹುದು
  • ಟ್ರೆಕ್ಕಿಂಗ್ ಮಾಡಲು ಹೇಳಿ ಮಾಡಿಸಿದ ಜಾಗ

ಐತಿಹಾಸಿಕ ತಾಣ ಹಂಪಿ

ಇನ್ನು ಸ್ವಲ್ಪ ಐತಿಹಾಸಿಕ ಸ್ಥಳಗಳನ್ನ ವೀಕ್ಷಿಸೋಣ ಅಂದ್ಕೊಂಡರೆ.. ಅಥವಾ ನಿಮಗೆ ಐತಿಹಾಸಿಕ ಹಾಗೂ ವಾಸ್ತುಶಿಲ್ಪಗಳ ಮೇಲೆ ಆಸಕ್ತಿ ಹೊಂದಿದ್ದರೆ ವಿಜಯನಗರದತ್ತ ಪ್ರಯಾಣ ಬೆಳಸಬಹುದು. ಹಂಪಿ ಅತ್ಯತ್ತಮ ಸ್ಥಳ.

  • ವಿರೂಪಾಕ್ಷ ದೇವಾಲಯ
  • ಕಲ್ಲಿನ ರಥ
  • ವಿಜಯ ವಿಠ್ಠಲ ದೇವಾಲಯ
  • ಕಮಲ ಮಹಲ್
  • ತುಂಗಭದ್ರಾ ನದಿಯ ಸೌಂದರ್ಯ

ಅಕ್ಟೋಬರ್ ತಿಂಗಳಲ್ಲಿ ಬಿಸಿಲಿನ ತಾಪ ಕಡಿಮೆ ಇರಲಿದ್ದು, ಮಕ್ಕಳಿಗೆ ಇತಿಹಾಸ ತಿಳಿಯಲು ಹೇಳಿ ಮಾಡಿಸಿದ ಜಾಗ

ಉತ್ತರ ಕನ್ನಡ

ಕರಾವಳಿ ತೀರದ ಕಡೆ ಹೋಗೋಣ ಅಂದರೆ ನೀವು ಗೋಕರ್ಣ, ಮುರ್ಡೇಶ್ವರ ಕಡೆಗಳಿಗೆ ಮುಖ ಮಾಡಬಹುದು. ಬೀಚ್ ಇಷ್ಟಪಡೋರು ಗೋಕರ್ಣ, ಮುರ್ಡೇಶ್ವರ ಮತ್ತು ಕಾರವಾರದ ಕಡೆ ಹೋಗಿ ಬನ್ನಿ.

  • ಮುರ್ಡೇಶ್ವರದ ಬೃಹತ್ ಶಿವನ ಪ್ರತಿಮೆ
  • ಗೋಕರ್ಣದ ಓಂ ಬೀಚ್
  • ಕುಡ್ಲೆ ಬೀಚ್
  • ಕಾಂಡ್ಲಾ ವನ
  • ಸೂರ್ಯಾಸ್ತಗಳು ರಜೆಯ ಮಜವನ್ನು ಇಮ್ಮಡಿಗೊಳಿಸುತ್ತವೆ
  • ಕರಾವಳಿಯ ರುಚಿಕರ ಊಟ ಸವಿಯಬಹುದು

ನೀವು ಪ್ರವಾಸಕ್ಕೆ ಹೋಗಬೇಕು ಅಂದರೆ ಇವತ್ತೇ ಅಲರ್ಟ್ ಆಗಿ. ಇದು ದಸರಾ ಸಮಯ. ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಹೋಟೆಲ್, ಹೋಂಸ್ಟೇಗಳು ಬ್ಯುಸಿ ಇರುತ್ತವೆ. ಅವುಗಳನ್ನ ಮೊದಲೇ ಬುಕ್ ಮಾಡಿಕೊಂಡರೆ ನಿಮಗೆ ಯಾವುದೇ ಸಮಸ್ಯೆ ಆಗಲ್ಲ. ಏಕಾಏಕಿ ಹೋಗೋದ್ರಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.