ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಒಂದೇ ಜಿಲ್ಲೆಯ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ಮತ್ತು ರೂಪಕಲಾ ಶಶಿಧರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತಮ್ಮ ಹಾಗೂ ತಮ್ಮ ತಂದೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ರೂಪಕಲಾ ಅವರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಹೇಗಾಯ್ತು?
ಬೆಂಗಳೂರು(ಸೆ.24): ಆಡಳಿತ ಪಕ್ಷದ ಒಂದೇ ಜಿಲ್ಲೆಯ ಇಬ್ಬರು ಶಾಸಕರ ನಡುವೆಯೇ ವಿಧಾನಸಭೆಯಲ್ಲಿ ಪರಸ್ಪರ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯದಲ್ಲಿ ಗದ್ದಲ ನಡೆಯುತ್ತಿದ್ದಾಗ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮಧ್ಯೆ ಮಾತಿನ ಜಟಾಪಟಿ ನಡೆಸಿದರು.
ಏನ್ ಮಾಡೋಕ್ ಆಗುತ್ತೆ ನಿಮ್ ಕೈಲಿ..?
ರೂಪಕಲಾ ಅವರು ನಾರಾಯಣಸ್ವಾಮಿ ಅವರತ್ತ ಕೈ ತೋರಿಸಿ ಏರುಧ್ವನಿಯಲ್ಲಿ ಮೇಜು ತಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ನಡುವೆ ಸಂಘರ್ಷಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ, ತಮ್ಮ ಹಾಗೂ ತಮ್ಮ ತಂದೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಬಗ್ಗೆ ಮಾಧ್ಯಮಗಳಲ್ಲಿ ಹಗುರವಾಗಿ ಮಾತನಾಡುತ್ತಿದ್ದೀರಿ. ನಮ್ಮನ್ನು ಅಪಮಾನ ಮಾಡುವುದಕ್ಕೇ ನೀವು ಒಂದಾಗಿದ್ದೀರಿ. ಏನು ಮಾಡೋದಕ್ಕೆ ಆಗುತ್ತೆ ನಿಮ್ಮ ಕೈಯಲ್ಲಿ ಎಂದು ರೂಪಕಲಾ ತರಾಟೆಗೆ ತೆಗೆದುಕೊಂಡರು ಎನ್ನಲಾಗುತ್ತಿದೆ.
ನಾರಾಯಣಸ್ವಾಮಿ ಮತ್ತು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಕ್ಕಪಕ್ಕ ಕುಳಿತು ನಗುನಗುತ್ತಾ ಮಾತನಾಡುತ್ತಿದ್ದಾಗ ಹಿಂದಿನ ಆಸನದಲ್ಲಿ ಕುಳಿತಿದ್ದ ರೂಪಕಲಾ ಜೋರಾಗಿ ಮಾತನಾಡುತ್ತಾ ಮೇಜು ಕುಟ್ಟಿ ತಮ್ಮ ಆಕ್ರೋಶ ಹೊರಹಾಕುತ್ತಿರುವುದು ವಿಧಾನಸಭೆ ಸಚಿವಾಲಯದ ವಿಡಿಯೋದಲ್ಲಿ ದಾಖಲಾಗಿದೆ.
ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ
ಅದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವ್ಯಂಗ್ಯ ಮಾಡುತ್ತಾ, ‘ಅಲ್ಲೊಂದು ಗಲಾಟೆಯಾಗುತ್ತಿದೆ ನೋಡಿ. ಸುಮ್ನಿರಮ್ಮಾ ಹೊಡಿಬೇಡ’ ಎಂದು ರೂಪಕಲಾ ಶಶಿಧರ್ ಅವರ ಕಾಲೆಳೆದರು. ಬಳಿಕ ಅವರು ತಮ್ಮ ಸ್ಥಾನಕ್ಕೆ ಹೋಗಿ ಕುಳಿತರು.


