ವಿಮಾನದ ಕಿಟಕಿಯ ಮೇಲೆ ಮಹಿಳಾ ಕಲಾವಿದೆಯೊಬ್ಬರು ಗಣಪತಿ ಚಿತ್ರ ಬಿಡಿಸಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಿದ ಆಕೆಯನ್ನು 'ನೋ ಫ್ಲೈ ಲಿಸ್ಟ್'ಗೆ ಸೇರಿಸಲು ನೆಟ್ಟಿಗರು ಆಗ್ರಹಿಸಿದ್ದರು. ಆದರೆ, ಕೊನೆಗೆ ಆ ವಿಡಿಯೋದ ಹಿಂದಿನ ಅಸಲಿ ಸತ್ಯ ಹೊರಬಂದಿದೆ.
ಬೆಂಗಳೂರು / ಮುಂಬೈ: ವಿಮಾನದ ಕಿಟಕಿಯ ಮೇಲೆಯೇ ಗಣಪತಿ ದೇವರ ಸುಂದರ ಚಿತ್ರವನ್ನು ಬಿಡಿಸಿದ ಭಾರತೀಯ ಮಹಿಳಾ ಕಲಾವಿದೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿಮಾನದ ಸಾರ್ವಜನಿಕ ಆಸ್ತಿಯನ್ನು ಹಾಳುಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು, ಆಕೆಯನ್ನು 'ನೋ ಫ್ಲೈ ಲಿಸ್ಟ್' (No-Fly List) ಅಂದರೆ ವಿಮಾನಯಾನ ನಿಷೇಧಿತರ ಪಟ್ಟಿಗೆ ಸೇರಿಸಬೇಕೆಂದು ತೀವ್ರವಾಗಿ ಆಗ್ರಹಿಸಿದ್ದರು. ಆದರೆ, ಕೊನೆಗೆ ಆ ವಿಡಿಯೋದ ಹಿಂದಿನ ಅಸಲಿ ಸತ್ಯ ಹೊರಬಂದಿದೆ.
ವೈರಲ್ ವಿಡಿಯೋದ ಅಸಲಿ ಕಥೆ ಏನು?
ಭಾರತೀಯ ಕಲಾವಿದೆ ಮಿತಾಲಿ ಸಾಲುಂಕೆ ಎಂಬುವವರು ತಮ್ಮ ವಿಮಾನಯಾನದ ಸಂದರ್ಭದಲ್ಲಿ ವಿಮಾನದ ಕಿಟಕಿಯ ಮೇಲೆ ಗಣಪತಿ ದೇವರ ಚಿತ್ರವನ್ನು ಬಿಡಿಸುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. 'ಯಾತ್ರೆ ಮಾಡುವಾಗ ಹೊಸದೊಂದು ಕ್ಯಾನ್ವಾಸ್ ಸಿಕ್ಕಿದೆ' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ವೀಕ್ಷಕರಿಗೆ ಇದು ವಿಮಾನದ ಗಾಜಿನ ಮೇಲೆ ನೇರವಾಗಿ ಪೇಂಟ್ ಮಾಡಲಾಗಿದೆ ಎಂದೇ ಅನಿಸಿತ್ತು.
ವಿಡಿಯೋ ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಗರು ಕೆರಳಿ ಕೆಂಡವಾಗಿದ್ದಾರೆ. ವಿಮಾನದ ಒಳಭಾಗವನ್ನು ಹಾಳು ಮಾಡಿದ್ದಕ್ಕೆ ಈಕೆಗೆ ದಂಡ ವಿಧಿಸಬೇಕು ಮತ್ತು ತಕ್ಷಣವೇ 'ನೋ ಫ್ಲೈ ಲಿಸ್ಟ್'ಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಕಿಟಕಿಗಳನ್ನು ಮುಚ್ಚುವುದು ಅಥವಾ ಮರೆ ಮಾಡುವುದು ಸುರಕ್ಷತಾ ದೃಷ್ಟಿಯಿಂದ ತೊಂದರೆ ಉಂಟುಮಾಡಬಹುದು ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದರು.
ಸ್ಪಷ್ಟನೆ ನೀಡಿದ ಕಲಾವಿದೆ:
ಟೀಕೆಗಳು ಮತ್ತು ವಿರೋಧ ಹೆಚ್ಚಾಗುತ್ತಿದ್ದಂತೆ ಕಲಾವಿದೆ ಮಿತಾಲಿ ಸಾಲುಂಕೆ ಅಂತಿಮವಾಗಿ ಸ್ಪಷ್ಟನೆ ನೀಡಿದ್ದಾರೆ. ತಾನು ವಿಮಾನದ ಗಾಜಿನ ಮೇಲೆ ನೇರವಾಗಿ ಪೇಂಟ್ ಮಾಡಿಲ್ಲ, ಬದಲಿಗೆ ಒಂದು ಪಾರದರ್ಶಕ (Transparent) ಶೀಟ್ ಮೇಲೆ ಈ ಚಿತ್ರವನ್ನು ಬಿಡಿಸಿದ್ದು, ಅದನ್ನು ಕಿಟಕಿಯ ಮೇಲೆ ಇಟ್ಟು ವಿಡಿಯೋ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಾವು ಪಾರದರ್ಶಕ ಶೀಟ್ ಹಿಡಿದುಕೊಂಡಿರುವ ಫೋಟೋವನ್ನೂ ಅವರು ಸಾಕ್ಷ್ಯವಾಗಿ ಹಂಚಿಕೊಂಡಿದ್ದಾರೆ. ಮಿತಾಲಿ ಸಾಲುಂಕೆ ಹಾಗೂ ಚೇತನ್ ಅದ್ವಿರ್ಕರ್ ಅವರ ‘ಲೈವ್ ಇಂಡಿಯನ್ ಪೇಂಟರ್’ ಆರ್ಟ್ಸ್ ತಂಡವು ಈ ವಿನೂತನ ಪ್ರಯೋಗ ಮಾಡಿದ್ದು, ಇದೀಗ ವಿವಾದಕ್ಕೆ ತೆರೆಬಿದ್ದಿದೆ.


