ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು 'ಖಾಲಿ ಚೊಂಬು' ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಹಣಕಾಸು ಇಲಾಖೆಯ ರಹಸ್ಯ ಪತ್ರವು ಸರ್ಕಾರದ ಆರ್ಥಿಕ ದುಸ್ಥಿತಿಯನ್ನು ಬಯಲಿಗೆಳೆದಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಗುರುವಾರ ರಾಜ್ಯಾದ್ಯಂತ 'ದಿವಾಳಿ ಸರ್ಕಾರದ ಶವಯಾತ್ರೆ' ನಡೆಸಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರು (ಸೆ.24): ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿಯು, ಸರ್ಕಾರದ ಆರ್ಥಿಕ ದುರಾಡಳಿತವನ್ನು ಖಂಡಿಸಿ ಗುರುವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ದಿವಾಳಿ ಸರ್ಕಾರದ ಶವಯಾತ್ರೆ’ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಗುತ್ತಿಗೆದಾರರು, ಸಾರಿಗೆ ಸಂಸ್ಥೆಗಳು, ಆರೋಗ್ಯ ಸಿಬ್ಬಂದಿ, ಅತಿಥಿ ಶಿಕ್ಷಕರು ಹಾಗೂ ರೈತರ ಸಂಕಷ್ಟಗಳಿಗೆ ಪರಿಹಾರ ನೀಡಲು ಹಣವಿಲ್ಲದಿದ್ದರೂ, ಸರ್ಕಾರ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಾ ಜನರನ್ನು ಮರುಳು ಮಾಡುತ್ತಿದೆ ಎಂದು ಕಿಡಿಕಾರಿದರು.

ಹಣಕಾಸು ಇಲಾಖೆ ಪತ್ರವೇ ಸಾಕ್ಷಿ:

ಇದೇ ತಿಂಗಳ 17ರಂದು ಹಣಕಾಸು ಇಲಾಖೆಯೇ ಮುಖ್ಯಮಂತ್ರಿಗಳಿಗೆ ಬರೆದಿರುವ ರಹಸ್ಯ ಪತ್ರವು ರಾಜ್ಯದ ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ಬಯಲಿಗೆಳೆದಿದೆ. ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟವಾಗಿದ್ದು, ರಾಜ್ಯದ ಸಾಲ ಮಾಡುವ ಸಾಮರ್ಥ್ಯ ಮುಗಿದುಹೋಗಿದೆ ಎಂದು ಆ ಇಲಾಖೆಯೇ ಎಚ್ಚರಿಕೆ ನೀಡಿದೆ. ಇದು ಸಾಮಾನ್ಯ ಪತ್ರವಲ್ಲ, ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ವಿದಾನಸೌಧದ ಮುಂದೆ ‘ಖಾಲಿ ಚೊಂಬು’ ಪ್ರತಿಭಟನೆ:

ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಜಮಾಯಿಸಿದ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಶಾಸಕರು, ಸರ್ಕಾರದ ವಿರುದ್ಧ ‘ಖಾಲಿ ಚೊಂಬು’ ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, "ಇದು ಪಾಪರ್ ಸರ್ಕಾರ. ಕರ್ನಾಟಕದಲ್ಲಿ ಸರ್ಕಾರ ನಡೆಸುವ ಯೋಗ್ಯತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಬರ ಪರಿಹಾರಕ್ಕೆ ಹಣವಿಲ್ಲ, 4 ತಿಂಗಳಿಂದ ಪಿಂಚಣಿ ಬಂದಿಲ್ಲ, ಶಿಕ್ಷಕರಿಗೆ ಸಂಬಳವಿಲ್ಲ, ರೈತರಿಗೆ ಕರೆಂಟ್ ಇಲ್ಲ, ಹಾಲು ಉತ್ಪಾದಕರ ಸಬ್ಸಿಡಿ ಹಣ 12 ತಿಂಗಳಿಂದ ಬಾಕಿ ಇದೆ. ಇವತ್ತು ಕಾಂಗ್ರೆಸ್ ಪಕ್ಷ ಜನರ ಪಾಲಿಗೆ ‘ಚೊಂಬು’ ಕೊಟ್ಟಿದೆ" ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಜನತೆಯ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸದೆ ಹೈಕಮಾಂಡ್ ಚುನಾವಣಾ ನಿಧಿಗಾಗಿ ಲೂಟಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಪ್ರತಿಭಟನಾ ಸಭೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.