ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳಲ್ಲಿ ಭಾರೀ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆನ್ನಿಗೆ ಇ.ಡಿ ಬಿದ್ದಿದೆ. ಈ ಲಂಚದ ಹಣವನ್ನು ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿಗಾರಿಕೆ ಸೇರಿದಂತೆ ವಿವಿಧ ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬೆಂಗಳೂರು: ಕೇಂದ್ರ ಸರ್ಕಾರದ ಬಂಡವಾಳ ಸಹಾಯ ಯೋಜನೆ (ಕ್ಯಾಪಿಟಲ್‌ ಅಸಿಸ್ಟೆಂಟ್‌ ಸ್ಕ್ರೀಂ) ಅಡಿ ಕೈಗೆತ್ತಿಕೊಳ್ಳಲಾದ ರಸ್ತೆ ಕಾಮಗಾರಿಗಳ ಸಂಬಂಧ ವಿವಿಧ ಗುತ್ತಿಗೆ ಕಂಪನಿಗಳಿಂದ ಭಾರೀ ಪ್ರಮಾಣದ ಲಂಚ ಪಾವತಿಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ವು ಸಚಿವ ಸತೀಶ್‌ ಜಾರಕಿಹೊಳಿ ಅವರ ಬೆನ್ನುಬಿದ್ದಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ- ವಿಜಯಪುರ- ಎಚ್‌.ಕ್ರಾಸ್‌- ವೇಮಗಲ್‌- ಮಾಲೂರು- ತಮಿಳುನಾಡು ಗಡಿವರೆಗೆ ಹಾಗೂ ಮಾಲೂರು- ಹೊಸಕೋಟೆ ರಸ್ತೆ ಸೇರಿದಂತೆ 110.40 ಕಿ.ಮೀ. ಉದ್ದದ ಮೂರು ಪ್ಯಾಕೇಜ್‌ಗಳ ರಸ್ತೆ ಕಾಮಗಾರಿಗಳಿಗೆ ಹೈಬ್ರಿಡ್‌ ಆನ್ಯುಟಿ ಮಾದರಿಯಲ್ಲಿ(ಎಚ್‌ಎಎಂ) ಅನುಮೋದನೆ ನೀಡಲಾಗಿತ್ತು. ಇದರ ಒಟ್ಟು ಯೋಜನಾ ಮೊತ್ತ 3190 ಕೋಟಿ ರು.

ರಾಜ್ಯ ಸರ್ಕಾರದ ಪಾಲಿನ ಶೇ.40ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದ ಕ್ಯಾಪಿಟಲ್‌ ಅಸಿಸ್ಟೆಂಟ್‌ ಸ್ಕೀಂ ಮೂಲಕ ಭರಿಸಲಾಗಿದ್ದು, ಆ ಮೊತ್ತವನ್ನು ಬಳಸಿಕೊಂಡು ಅನುದಾನ ಬಳಕೆ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ. ಸದರಿ ಮೊತ್ತವನ್ನು ಬಳಸಿಯೇ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಸತೀಶ್‌ ಜಾರಕಿಹೊಳಿ ಮತ್ತು ಅವರ ಸಂಬಂಧಿಕರು ಹಾಗೂ ಸಹಚರರ ಹಿಂದೆ ಬಿದ್ದಿದೆ. ಈ ಯೋಜನೆಗಳಿಂದಲೇ ಲಂಚ ಪಾವತಿಯಾಗಿರುವ ಹಾಗೂ ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಿರುವ ಆರೋಪದ ಸಂಬಂಧ ಇ.ಡಿ. ತನಿಖೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆ ಅನ್ವಯ ಕೇಂದ್ರದ ಶೇ. 40ರಷ್ಟು ಮೊತ್ತವಲ್ಲದೆ, ಉಳಿದ ಶೇ.60ರಷ್ಟು ಅನುದಾನವನ್ನು ಗುತ್ತಿಗೆದಾರರಿಂದಲೇ ಸಾಲದ ರೂಪದಲ್ಲಿ ಹೂಡಿಕೆ ಮಾಡಲಾಗಿದೆ. ಈ ರಸ್ತೆಗಳನ್ನು ಗುತ್ತಿಗೆದಾರರೇ 15 ವರ್ಷಗಳವರೆಗೆ ನಿರ್ವಹಿಸಲಿದ್ದು, ಶೇ.60ರಷ್ಟು ಹೂಡಿಕೆ ಮೊತ್ತವನ್ನು ಮುಂದಿನ 15 ವರ್ಷಗಳವರೆಗೆ ಗುತ್ತಿಗೆದಾರರಿಗೆ ವಾರ್ಷಿಕ ನಿಗದಿತ ಮೊತ್ತದಂತೆ ಬಡ್ಡಿ ಸಮೇತ ಪಾವತಿಸಲಾಗುತ್ತದೆ. ಒಟ್ಟಿನಲ್ಲಿ ಲಂಚ ಪ್ರಕರಣದ ಆರೋಪವಿರುವ ಈ ರಸ್ತೆ ಪ್ಯಾಕೇಜ್‌ ಯೋಜನೆಗಳಿಗೆ ರಾಜ್ಯ ಸರ್ಕಾರದ ಅನುದಾನ ಏನೂ ಇಲ್ಲ. ಕೇಂದ್ರದ ನೆರವು ಹಾಗೂ ಗುತ್ತಿಗೆದಾರರ ಸಾಲದ ಹೂಡಿಕೆಯಲ್ಲಿ ಕೈಗೊಂಡಿರುವ ಯೋಜನೆಗಳಾಗಿವೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಇನ್ನು, ಈ ಹೈಬ್ರಿಡ್ ಆನ್ಯುಟಿ ಮಾದರಿಯಲ್ಲಿ ಕೈಗೊಂಡಿರುವ ಮೂರು ಪ್ಯಾಕೇಜ್‌ಗಳಿಗೆ ಕೇಂದ್ರದ ಶೇ.40ರಷ್ಟು ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿರುವುದಾಗಿ ರಾಜ್ಯ ಸರ್ಕಾರ ಬಳಕೆ ಪ್ರಮಾಣಪತ್ರವನ್ನೂ ಕೇಂದ್ರಕ್ಕೆ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಎಚ್‌ಎಎಂ ಮಾದರಿ:?

ಹೈಬ್ರಿಡ್ ಆನ್ಯುಟಿ ಮಾದರಿಯಲ್ಲಿ(ಎಚ್‌ಎಎಂ) ರಸ್ತೆ ಕಾಮಗಾರಿಯ ಒಟ್ಟು ವೆಚ್ಚದ ಶೇ.40ರಷ್ಟನ್ನು ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸರ್ಕಾರ ಪಾವತಿಸುತ್ತದೆ. ಉಳಿದ ಶೇ.60ರಷ್ಟು ಮೊತ್ತವನ್ನು ಗುತ್ತಿಗೆದಾರರು ಸಾಲದ ರೂಪದಲ್ಲಿ ಸಂಗ್ರಹಿಸಿ ಕಾಮಗಾರಿಗೆ ಬಳಸುತ್ತಾರೆ. ಬಳಿಕ ಸರ್ಕಾರವು ಸಾಲದ ಮೊತ್ತಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಆನ್ಯುಟಿ ಪಾವತಿ ಮಾಡುವ ವ್ಯವಸ್ಥೆ ಇದಾಗಿದೆ. ಈ ಯೋಜನೆಗಳ ವಿಶೇಷತೆ ಎಂದರೆ, ರಾಜ್ಯ ಸರ್ಕಾರದ ಪಾಲಿನ ಶೇ.40ರಷ್ಟು ಹಣವನ್ನು ಕೇಂದ್ರ ಸರ್ಕಾರದ ಕ್ಯಾಪಿಟಲ್‌ ಅಸಿಸ್ಟೆನ್ಸ್‌ ಸ್ಕೀಂ ಅಡಿಯಲ್ಲಿ ಬಿಡುಗಡೆಯಾಗುವ ಅನುದಾನದ ಮೂಲಕ ಭರಿಸಲಾಗುತ್ತಿದೆ. ಹೀಗಾಗಿ ಕಾಮಗಾರಿಗಳಿಗೆ ಬಳಸಲಾಗುತ್ತಿರುವ ಹಣದಲ್ಲಿ ಕೇಂದ್ರ ಅನುದಾನವೇ ಪ್ರಮುಖ ಪಾಲು ಹೊಂದಿದೆ.

ಇ.ಡಿ. ದಾಳಿ ವೇಳೆ ಹಲವು ದಾಖಲೆ ಪತ್ತೆ

ಜಾರಿ ನಿರ್ದೇಶನಾಲಯವು (ಇ.ಡಿ.) ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಅವರ ಸಂಬಂಧಿಕರು, ಸಹಚರರ ಮನೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಜಾರಕಿಹೊಳಿ ಅವರು ಆಫ್ರಿಕಾ ಖಂಡಕ್ಕೆ ಸೇರಿದ ಕಾಂಗೋ ದೇಶದ ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆಯ ವೇಳೆ, ಸತೀಶ್‌ ಜಾರಕಿಹೊಳಿ ಕುಟುಂಬದ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ. ಮಂಜುನಾಥ್ ಅವರ ಪತ್ನಿ ಮತ್ತು ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು (ಪಾಲು) ಹೊಂದಿರುವುದು ಪತ್ತೆಯಾಗಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ಬಹಿರಂಗಪಡಿಸಿತ್ತು. ಆಫ್ರಿಕಾದಲ್ಲಿ ಗಣಿಗಾರಿಕೆ ಸಂಬಂಧಿಸಿದ ಮತ್ತು ಅಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಹಾಗೂ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈ.ಲಿ. ಸೇರಿದಂತೆ ವಿವಿಧ ಗುತ್ತಿಗೆ ಕಂಪನಿಗಳು ಭಾರೀ ಪ್ರಮಾಣದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಏನಿದು ಕೇಂದ್ರ ಹಣ?

  • ಬೆಂಗಳೂರು ಬಳಿ ಎರಡು ರಸ್ತೆ ಯೋಜನೆಗಳನ್ನು ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಳ್ಳಲಾಗಿತ್ತು
  • ಇದಕ್ಕೆ ಕೇಂದ್ರದ ಬಂಡವಾಳ ಸಹಾಯ ಯೋಜನೆಯ ಮೂಲಕ ಸರ್ಕಾರ ನೆರವು ಪಡೆದಿತ್ತು
  • ಯೋಜನೆಯ ಒಟ್ಟು ವೆಚ್ಚದಲ್ಲಿ 40% ಅನ್ನು ಕೇಂದ್ರ ಸರ್ಕಾರದ ನಿಧಿಯ ಮೂಲಕ ಭರಿಸಲಾಗಿತ್ತು
  • ಉಳಿದ ಶೇ.60ರಷ್ಟು ಹಣವನ್ನು ಕಾಮಗಾರಿಗಳ ಗುತ್ತಿಗೆದಾರರೇ ಸಾಲದ ರೂಪದಲ್ಲಿ ಹೂಡಿದ್ದರು
  • ಆ ಹಣವನ್ನು 15 ವರ್ಷಗಳ ಕಾಲ ವರ್ಷಕ್ಕೊಮ್ಮೆ ಪಾವತಿ ಮಾಡುವ ಸಂಬಂಧ ಒಪ್ಪಂದ ಆಗಿತ್ತು
  • ಅನುದಾನ ಬಳಸಿಕೊಂಡಿರುವುದಾಗಿ ರಾಜ್ಯ ಸರ್ಕಾರ ಬಳಕೆ ಪ್ರಮಾಣಪತ್ರವನ್ನು ರಾಜ್ಯ ಸಲ್ಲಿಸಿತ್ತು
  • ರಾಜ್ಯದ ನಯಾಪೈಸೆ ಅನುದಾನವಿಲ್ಲದ ಈ ಯೋಜನೆಯಲ್ಲಿ ಲಂಚ ಸ್ವೀಕರಿಸಿದ ಆರೋಪ
  • ಇದನ್ನು ಗಂಭೀರವಾಗಿ ಪರಿಗಣಿಸಿ ಜಾರಕಿಹೊಳಿ ಹಾಗೂ ಪರಿವಾರದ ವಿರುದ್ಧ ಇ.ಡಿ. ದಾಳಿ