ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ

ನ್ಯಾಯ ಕೇಳಿ ಠಾಣೆಗೆ ಬಂದ ಮಹಿಳೆಯರಿಂದಲೇ ಲೈಂಗಿಕ ಸುಖ ಬಯಸಿದ ಆರೋಪದ ಮೇಲೆ ಮೂಡಿಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿಯನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತೆಯರ ಸರಣಿ ದೂರುಗಳ ನಂತರ ಈತನ ಕರಾಳ ಮುಖವಾಡ ಬಯಲಾಗಿದ್ದು, ಕೇವಲ ಅಮಾನತು ಸಾಲದು, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

Share this Video
  • FB
  • Linkdin
  • Whatsapp

ದಕ್ಷಿಣ ಕನ್ನಡ: ಕಾನೂನು ರಕ್ಷಣೆ ಮಾಡಬೇಕಾದವರೇ ಭಕ್ಷಕರಾದರೆ ಸಾಮಾನ್ಯ ಜನರ ಗತಿಯೇನು? ಅದರಲ್ಲೂ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯೇ ಅವರಿಂದ 'ಲೈಂಗಿಕ ಸುಖ' ಬಯಸಿದರೆ ಆ ವ್ಯವಸ್ಥೆಯನ್ನು ಏನೆನ್ನಬೇಕು? ಇಂತಹದೊಂದು ಘೋರ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಮೂಡಿಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಅಸಲಿ ಮುಖವಾಡ ಈಗ ಒಂದೊಂದಾಗಿ ಬಯಲಾಗುತ್ತಿದೆ. ಸಂತ್ರಸ್ತೆಯರ ಸರಣಿ ದೂರಿನ ಬೆನ್ನಲ್ಲೇ ಈ 'ಮಾನಗೇಡಿ' ಇನ್ಸ್‌ಪೆಕ್ಟರ್‌ನನ್ನು ಈಗ ಅಮಾನತುಗೊಳಿಸಲಾಗಿದೆ.

ಬಗೆದಷ್ಟು ಬಯಲಾಗ್ತಿದೆ ಕಾಮಪುರಾಣ:

ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಅವರ ಕಾಮಲೀಲೆಯ ಮೊದಲ ಭಾಗ ನಿನ್ನೆಯಷ್ಟೇ ಬಯಲಾಗಿತ್ತು. ಒಬ್ಬ ಧೈರ್ಯವಂತ ಮಹಿಳೆ ಕ್ಯಾಮರಾ ಮುಂದೆ ಬಂದು ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ರಕ್ಷಣೆ ಕೋರಿ ಠಾಣೆಗೆ ಹೋದಾಗ ಈ ಅಧಿಕಾರಿ ಆಕೆಯನ್ನು ಮಂಚಕ್ಕೆ ಕರೆದಿದ್ದ ಎನ್ನುವ ಸ್ಫೋಟಕ ಸತ್ಯ ಹೊರಬಿದ್ದಿತ್ತು. ಈ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಈತನಿಂದ ಸಂತ್ರಸ್ತರಾದ ಇನ್ನಷ್ಟು ಮಹಿಳೆಯರು ಈಗ ಧೈರ್ಯ ಮಾಡಿ ಹೊರಬಂದಿದ್ದಾರೆ. ಈತನ ಲೀಲೆಗಳು ಬಗೆದಷ್ಟು ದಿಗಿಲು ಹುಟ್ಟಿಸುವಂತಿವೆ.

ರಕ್ಷಕನೋ ಅಥವಾ ಬೀದಿ ರೌಡಿಯೋ?

ಸಂದೇಶ್ ಪಿಜಿ ಕೇವಲ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದದ್ದು ಮಾತ್ರವಲ್ಲ, ಠಾಣೆಯಲ್ಲೇ ರೌಡಿಯಂತೆ ವರ್ತಿಸುತ್ತಿದ್ದ ಎನ್ನುವ ಆರೋಪಗಳು ಕೇಳಿಬಂದಿವೆ. ಕಾಂಪೌಂಡ್ ಹಾರಿ ಹೋಗುವುದು, ಠಾಣೆಯಲ್ಲೇ ಸಹೋದ್ಯೋಗಿಗಳ ಜೊತೆ ಫೈಟಿಂಗ್ ಮಾಡುವುದು ಈತನ ನಿತ್ಯದ ಕಾಯಕವಾಗಿತ್ತು ಎನ್ನಲಾಗಿದೆ. ಈತನ ದರ್ಪಕ್ಕೆ ಬೆದರಿ ಯಾರೂ ದೂರು ನೀಡಲು ಮುಂದಾಗುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಇವನ ವಿರುದ್ಧ ಧ್ವನಿ ಎತ್ತಿದರೆ, ಅವರನ್ನೇ ಸುಳ್ಳು ಕೇಸ್‌ನಲ್ಲಿ ಸಿಲುಕಿಸಿ ಅರೆಸ್ಟ್ ಮಾಡುವ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತೆಯರು ಕಣ್ಣೀರಿಟ್ಟಿದ್ದಾರೆ.

ಸರಣಿ ದೂರುಗಳಿಂದ ಸಿಕ್ಕಿಬಿದ್ದ ಕಿರಾತಕ:

ಸಂದೇಶನಿಂದ ಚಿತ್ರಹಿಂಸೆ ಅನುಭವಿಸಿದ ಮಹಿಳೆಯರು ಕೊನೆಯ ಆಯ್ಕೆಯಾಗಿ ಮಾಧ್ಯಮದ ಮೊರೆ ಹೋಗಿದ್ದರು. ತಮಗೆ ಎದುರಾದ ಮಾನಸಿಕ ಮತ್ತು ದೈಹಿಕ ಕಿರುಕುಳದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದರು. ಈ ವರದಿಗಳು ರಾಜ್ಯಾದ್ಯಂತ ಸಂಚಲನ ಮೂಡಿಸಿದವು. ಯಾವಾಗ ಮಾಧ್ಯಮಗಳಲ್ಲಿ ಈತನ ಕರಾಳ ಮುಖ ಬಯಲಾಯಿತೋ, ಆಗ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದರು. ಪ್ರಾಥಮಿಕ ತನಿಖೆಯಲ್ಲಿ ಈತನ ನಡವಳಿಕೆ ಪೊಲೀಸ್ ಇಲಾಖೆಯ ಘನತೆಗೆ ಕುಂದು ತರುವಂತದ್ದು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ, ಸಂದೇಶ್ ಪಿಜಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ನ್ಯಾಯ ಸಿಗುವವರೆಗೆ ಹೋರಾಟ:

ಸಂದೇಶ ಅಮಾನತ್ತಾಗಿ ಮನೆಗೆ ಹೋಗಿದ್ದಾನೆ ನಿಜ. ಆದರೆ, ಈತನಿಂದ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಕೇವಲ ಅಮಾನತ್ತಿನಿಂದ ನ್ಯಾಯ ಸಿಗುವುದಿಲ್ಲ. ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ, ಕಾನೂನುಬದ್ಧವಾಗಿ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇಂತಹ ಕಪ್ಪು ಚುಕ್ಕೆಗಳಿಂದಾಗಿ ಇಲಾಖೆಯಲ್ಲಿರುವ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಗಳ ಮೇಲೂ ಜನರಿಗೆ ನಂಬಿಕೆ ತಪ್ಪುವಂತಾಗಿದೆ. ಈ 'ಕಾಮಪ್ರಿಯ' ಪೊಲೀಸಪ್ಪನಿಗೆ ತಕ್ಕ ಶಿಕ್ಷೆಯಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

Related Video