ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 80ರ ದಶಕದ ಎಐ ಫೋಟೋ ಟ್ರೆಂಡ್‌ಗೆ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ರೇಣುಕಾ ಚೌಧರಿ ವಿಭಿನ್ನವಾಗಿ ಸ್ಪಂದಿಸಿದ್ದಾರೆ. ಅವರು ಕೃತಕ ಬುದ್ಧಿಮತ್ತೆ ಬಳಸುವ ಬದಲು, ತಮ್ಮ ನಿಜವಾದ ಹಳೆಯ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ಹೊಸ ಟ್ರೆಂಡ್ ಶುರುವಾಗಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ 80ರ ದಶಕದ ತಮ್ಮ ಫೋಟೋಗಳನ್ನು ಸೃಷ್ಟಿಸಿ ಹಂಚಿಕೊಳ್ಳುವುದು ಈಗಿನ ಫ್ಯಾಷನ್. ಆದರೆ ಈ ವೈರಲ್ ಟ್ರೆಂಡ್‌ಗೆ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ರೇಣುಕಾ ಚೌಧರಿ ತಮ್ಮದೇ ಆದ 'ರಿಯಲ್' ಟ್ವಿಸ್ಟ್ ನೀಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಎಐ ಬೇಕಿಲ್ಲ, ಅಸಲಿ ಚಿತ್ರವೇ ಸಾಕು ಎಂದ ತರೂರ್
ಸದ್ಯ ಇಂಟರ್‌ನೆಟ್‌ನಲ್ಲಿ '80ರ ದಶಕದ ಇಯರ್‌ಬುಕ್' 80s ರೆಟ್ರೋ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಸೆಲೆಬ್ರಿಟಿಗಳಿಂದ ಸಾಮಾನ್ಯರವರೆಗೂ ತಮ್ಮ ಈಗಿನ ಫೋಟೋಗಳನ್ನು ಅಪ್‌ಲೋಡ್ ಮಾಡಿ, ನಿರ್ಧಿಸ್ಟ್ ಪ್ರಾಂಪ್ಟ್ ಬರೆದರೆ 80ರ ದಶಕದಲ್ಲಿ ಅವರು ಹೇಗಿರಬಹುದಿತ್ತು ಎಂಬುದನ್ನು ತೋರಿಸುವ ಚಿತ್ರಗಳನ್ನು ಎಐ ಸೃಷ್ಟಿಸಿಕೊಡುತ್ತದೆ. ಈ ಟ್ರೆಂಡ್‌ನ ನಡುವೆಯೇ, ಶಶಿ ತರೂರ್ ತಮ್ಮ 80ರ ದಶಕದ ನಿಜವಾದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.
80s ರೆಟ್ರೋ ಟ್ರೆಂಡ್‌ಗಾಗಿ ಫೋಟೋ ರಚಿಸಲು ನನಗೆ ಎಐ ಸಹಾಯ ಬೇಕಾಗಿಲ್ಲ ಎಂದಿರುವ ತರೂರ್ ತಮ್ಮದೇ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರ ಈ ನಡೆಗೆ ನೆಟ್ಟಿಗರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ತರೂರ್ ಅವರ ಅಂದಿನ ಯೌವನದ ದಿನಗಳ ಫೋಟೋ ನೋಡಿ ಅಭಿಮಾನಿಗಳು, 'ಎಐಗಿಂತ ನಿಮ್ಮ ನಿಜವಾದ ಫೋಟೋವೇ ಚೆಂದವಿದೆ' ಅಂತಾ ಕಾಮೆಂಟ್ ಮಾಡಿದ್ದಾರೆ.
ತರೂರ್ ಬೆನ್ನಲ್ಲೇ ರೇಣುಕಾ ಚೌಧರಿ ಹಳೇ ಫೋಟೋ ವೈರಲ್
ಶಶಿ ತರೂರ್ ಅವರ ಬೆನ್ನಲ್ಲೇ, ಹಿರಿಯ ನಾಯಕಿ ರೇಣುಕಾ ಚೌಧರಿ ಕೂಡಾ ತಮ್ಮ 80ರ ದಶಕದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರೂ ಕೂಡ ಎಐ ಮೊರೆ ಹೋಗದೆ, ತಮ್ಮ ನಿಜವಾದ, 80s ಫೋಟೋ ಮೂಲಕವೇ ಈ ಟ್ರೆಂಡ್‌ನಲ್ಲಿ ಭಾಗಿಯಾಗಿದ್ದಾರೆ. ಅವರ ಈ ನಡೆ ಕೂಡಾ ಇಂಟರ್‌ನೆಟ್‌ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೃತಕ ಬುದ್ಧಿಮತ್ತೆಯ ಭರಾಟೆಯಲ್ಲಿ ಈ ಇಬ್ಬರು ನಾಯಕರು ಹಂಚಿಕೊಂಡ ಅಸಲಿ ಚಿತ್ರಗಳು ಹೆಚ್ಚು ಗಮನ ಸೆಳೆದಿವೆ. ಒಟ್ಟಿನಲ್ಲಿ, ಎಐ ಸೃಷ್ಟಿಸಿದ ಚಿತ್ರಗಳಿಗಿಂತ ನೈಜ ಸೌಂದರ್ಯವೇ ಶ್ರೇಷ್ಠ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ ಎನ್ನಬಹುದು.


