ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ₹30,000 ಎಂದು ಪರಿಗಣಿಸಿರುವ ಹೈಕೋರ್ಟ್, ವಿಮಾ ಕಂಪನಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಾಧಿಕರಣ ನೀಡಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿ, ಗೃಹಿಣಿಯರ ಶ್ರಮ ಮತ್ತು ಕೊಡುಗೆಯನ್ನು ಕನಿಷ್ಠ ಆದಾಯದಲ್ಲಿ ಅಳೆಯಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಸೆ.13): ಮನೆ ಕೆಲಸ ನಿರ್ವಹಿಸುವ ಗೃಹಿಣಿಯರ ನಿಸ್ವಾರ್ಥ ಶ್ರಮ ಮತ್ತು ಕುಟುಂಬಕ್ಕೆ ಅವರು ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ವೇತನದ ಅಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 37 ವರ್ಷದ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ಬರೋಬ್ಬರಿ ₹30,000 ಎಂದು ಪರಿಗಣಿಸಿರುವ ನ್ಯಾಯಾಲಯ, ಮೃತರ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ₹11.18 ಲಕ್ಷ ಪರಿಹಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಪರಿಹಾರ ಮೊತ್ತ ₹11.18 ಲಕ್ಷದಿಂದ ₹59.69 ಲಕ್ಷಕ್ಕೆ ಏರಿಕೆ:

ನ್ಯಾಯಾಧಿಕರಣ ಈ ಹಿಂದೆ ನಿಗದಿಪಡಿಸಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿದ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಮೊತ್ತವಾದ ಒಟ್ಟು ₹59,69,000 (ಶೇ.9ರಷ್ಟು ವಾರ್ಷಿಕ ಬಡ್ಡಿ ಸಹಿತ) ಪಾವತಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗೃಹಿಣಿಯರ ಶ್ರಮವನ್ನು ಗುರುತಿಸುವ ವೇಳೆ ಸುಪ್ರೀಂ ಕೋರ್ಟ್‌ನ ‘ಶಿಶು ಪಾಲ್ ವಿರುದ್ಧ ಸುರ್ಜೀತ್’ ಪ್ರಕರಣದ ಐತಿಹಾಸಿಕ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯೊಬ್ಬರು ಕುಟುಂಬಕ್ಕೆ ನೀಡುವ ಸೇವೆ ಅಮೂಲ್ಯವಾದುದು. ಹೀಗಾಗಿ ಅವರ ಮಾಸಿಕ ಕಾಲ್ಪನಿಕ ಆದಾಯವನ್ನು ₹30 ಸಾವಿರ ಎಂದು ನಿಗದಿಪಡಿಸಿ, ಅದಕ್ಕೆ ಭವಿಷ್ಯದ ಗಳಿಕೆಯ ಶೇ.40 ಭಾಗವನ್ನು ಸೇರಿಸಿ ನ್ಯಾಯಾಲಯ ಈ ಬೃಹತ್ ಪರಿಹಾರ ಮೊತ್ತವನ್ನು ಅಂತಿಮಗೊಳಿಸಿದೆ.

ವಿಮಾ ಕಂಪನಿಯ ವಾದ ತಳ್ಳಿಹಾಕಿದ ಪೀಠ:

'ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಸವಾರ ಖುಲಾಸೆಗೊಂಡಿರುವುದರಿಂದ ಈ ಅಪಘಾತಕ್ಕೆ ವಿಮಾ ಕಂಪನಿ ಹೊಣೆಯಾಗುವುದಿಲ್ಲ' ಎಂದು ವಿಮಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ವಿಮಾ ಕಂಪನಿಯು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರಕರಣದ ಹಿನ್ನೆಲೆ:

2011ರ ಅಕ್ಟೋಬರ್‌ನಲ್ಲಿ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಾಯಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲೆಯ ಬಿಡದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಇದರ ವಿರುದ್ಧ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ಕೋರಿ ಮೃತರ ಸಂಬಂಧಿಕರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ನ್ಯಾಯಾಧಿಕರಣವು ₹11.18 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಮಾ ಕಂಪನಿ ಹಾಗೂ ಮೃತರ ಕುಟುಂಬಸ್ಥರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಗೃಹಿಣಿಯ ಗೌರವ ಮತ್ತು ಸ್ಥಾನಮಾನವನ್ನು ಎತ್ತಿಹಿಡಿದು ಪರಿಹಾರವನ್ನು ಬರೋಬ್ಬರಿ ₹59.69 ಲಕ್ಷಕ್ಕೆ ಹೆಚ್ಚಿಸಿದೆ.